spot_img
Wednesday, October 30, 2024
spot_imgspot_img
spot_img
spot_img

ಪರಂಪರೆಯ ಹೈನುಗಾರಿಕೆಗೆ ಹೊಸ ಸ್ಪರ್ಶ:ಹೈನುಗಾರಿಕೆಯಲ್ಲಿ ಛಾಪು ಮೂಡಿಸಿದ ಕುಟುಂಬ

ಪಾರಂಪರಿಕ ಕೃಷಿ ಪದ್ಧತಿಯಲ್ಲಿ ಗೋ ಸಾಕಾಣೆಗೆ ಹೆಚ್ಚಿನ ಮಹತ್ವ. ಕೃಷಿಗೆ ಬೇಕಾದ ಗೊಬ್ಬರ ಪಡೆಯುವುದು ಅದರ ಮೂಲ ಉದ್ದೇಶ. ಆದರೂ ಹಾಲು ಮತ್ತು ಅದರ ಉಪ ಉತ್ಪನ್ನಗಳು ಕೃಷಿಕರಿಗೆ ಒಂದಿಷ್ಟು ಆದಾಯ ಹೆಚ್ಚಿಸುವಲ್ಲಿ ಸಹಕಾರಿ. ಆದ್ದರಿಂದಲೇ ಕೃಷಿ ಮತ್ತು ಹೈನುಗಾರಿಕೆಯನ್ನು ಜೊತೆಯಾಗಿ ಮುನ್ನಡೆಸಿಕೊಂಡು ಯಶಸ್ಸು ಕಂಡವರು ಹಲವಾರು ಮಂದಿ

ಬಂಟ್ವಾಳ ಕ್ಷೇತ್ರದ ಮಾಜಿ ಶಾಸಕ ಶಿವರಾವ್ ಅವರು ಕೃಷಿ ಮನೆತನದವರು. ಕೃಷಿ ಹೈನುಗಾರಿಕೆಯನ್ನು ನೆಚ್ಚಿಕೊಂಡು ಯಶಸ್ಸನ್ನು ಜನಪ್ರತಿನಿಧಿಯಾಗಿ ಜನಪ್ರಿಯತೆಯನ್ನು ಗಳಿಸಿದವರು. ಮಂಗಳೂರು ತಾಲೂಕಿನ ಗುರುಪುರ ಹೋಬಳಿಯ ಉಳಾಯ್ ಬೆಟ್ಟು ಗ್ರಾಮದ ನಲಂದಾ ಫಾರ್ಮ್ಸ್ ಈಗ ಚಿರಪರಿಚಿತ. ಹೈನುಗಾರಿಕೆಯನ್ನು ನಿಲ್ಲಿಸದೆ ಮುನ್ನಡೆಸುತ್ತಿರುವ ಅವರ ಸೊಸೆ ಸುಭದ್ರಾ ರಾವ್ ಎನ್ ಅವರು ಹೈನುಗಾರಿಕೆ ಕ್ಷೇತ್ರದಲ್ಲಿ ತನ್ನದಾದ ಛಾಪು ಮೂಡಿಸಿದ್ದಾರೆ. ಪರಂಪರೆಯ ಹೈನುಗಾರಿಕಗೆ ಹೊಸ ಸ್ಪರ್ಶ ನೀಡಿದ್ದಾರೆ.

ಪತಿ ನೂಯಿ ರವಿರಾಜ್ ರಾವ್ ಅವರ ಪ್ರೇರಣೆ ಮತ್ತು ಪ್ರೋತ್ಸಾಹದೊಂದಿಗೆ ಸುಭದ್ರಾ ರಾವ್ ಹೈನುಗಾರಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಆದರೆ ಹಾಲು ಮತ್ತು ಅದರ ಉತ್ಪನ್ನಗಳಿಗೆ ಖಾಸಗಿ ಮರುಕಟ್ಟೆಯನ್ನೇ ಅವಲಂಬಿಸಿದ್ದರು. 2001 ರಿಂದ 2004 ರವರೆಗೆ ಹಾಲನ್ನು ಒಂದು ಲೀಟರ್ ಮತ್ತು ಅರ್ಧ ಲೀಟರ್ ಪ್ಯಾಕೆಟ್ ಮಾಡಿ ವಾಮಂಜೂರು ಪರಿಸರದಲ್ಲಿ ಮನೆ ಮನೆಗೆ ಸರಬರಾಜು ಮಾಡುತ್ತಿದ್ದರು. ಆಗ ಲೀಟರಿಗೆ 12 ರೂ. ಸಿಗುತ್ತಿತ್ತು. ಆದರೆ ನಿರಂತರತೆ ಇರಲಿಲ್ಲ. ಹಣ ಯಾವಾಗಲಾದರೂ ಬರುತ್ತಿತ್ತು ಗ್ರಾಹಕರಲ್ಲಿ ಯಾರಾದ್ರೂ ಮನೆಗೆ ಬೀಗ ಹಾಕಿ ಹೋದರೆ ಹಾಲು ವಾಪಾಸು ಮನೆಗೆ ತರಬೇಕಾಗಿತ್ತು. ಮಾರುಕಟ್ಟೆಯ ಅನಿಶ್ಚತತೆ ಕಾಡುತ್ತಿತ್ತು

ಹಾಲು ಉತ್ಪಾದಕರ ಸಂಘ ಸ್ಥಾಪನೆ

ಈ ನಡುವೆ ಹಾಲು ಉತ್ಪಾದಕರ ಸಹಕಾರಿ ಸಂಘ ರಚನೆಯ ಕನಸು ಚಿಗುರೊಡೆಯಿತು. ಊರ ಪರಿಸರದ ಮಹಿಳೆಯರನ್ನು ಒಟ್ಟುಗೂಡಿಸಿ 2005 ರಲ್ಲಿ ಪೆರ್ಮಂಕಿ ಹಾಲು ಉತ್ಪಾದಕರ ಮಹಿಳಾ ಸಂಘ ಸ್ಥಾಪನೆ ಮಾಡಿದರು. ಸಂಘದ ಸ್ಥಾಪಕ ಅಧ್ಯಕ್ಷೆಯಾಗಿರುವ ಸುಭದ್ರ ರಾವ್ 18 ವರ್ಷಗಳಿಂದ ಸಂಘವನ್ನು ಮುನ್ನಡೆಸುತ್ತಾ ಯಶಸ್ಸಿನತ್ತ ಕೊಂಡೊಯ್ದಿದ್ದಾರೆ. ಸಂಘ ಸ್ಥಾಪನೆಯಿಂದ ಆ ಪರಿಸರದ ಮಹಿಳೆಯರಿಗೆ ಸ್ವ ಉದ್ಯೋಗ ಮತ್ತು ಸ್ವಾವಲಂಬಿ ಜೀವನಕ್ಕೆ ಪ್ರೇರಣೆಯಾಗಿದೆ. ಹಾಲಿನ ಮಾರುಕಟ್ಟೆಯ ಅನಿಶ್ಚತತೆ ದೂರವಾಗಿದೆ. ಹಾಲಿನ ಹಣ ಖಾತೆಗೆ ಜಮಾ ಮಾಡಲಾಗುತ್ತಿದೆ. ಈ ಸಂಘದಲ್ಲಿ ಹಾಲಿನ ಹೆಚ್ಚಳ, ಸುತ್ತಮುತ್ತಲಿನ ಸಂಘಗಳ ಹಾಲು ಉತ್ಪಾದಕರಿಗೂ ಅನುಕೂಲ ಕಲ್ಪಿಸಲು ಬಲ್ಕ್ ಮಿಲ್ಕ್ ಕೂಲರ್ (ಬಿಎಮ್‌ಸಿ) ನಿರ್ಮಾಣ ಮಾಡಲಾಗಿದೆ. ಆಸುಪಾಸಿನ 6 ಸಂಘಗಳಿಂದ ಹಾಲು ಸಂಗ್ರಹಿಸಿ ನಂತರ ಘನೀಕರಿಸಿ ಮಂಗಳೂರಿನ ಕೇಂದ್ರ ಘಟಕಕ್ಕೆ ಕಳುಹಿಸಲಾಗುತ್ತಿದೆ.

ಹೈನುಗಾರಿಕೆಯನ್ನೇ ಮುಖ್ಯವಾಗಿರಿಸಿಕೊಂಡು ಸ್ವಾವಲಂಬನೆಗೆ ಒತ್ತು ನೀಡಿರುವ ಸುಭದ್ರ ರಾವ್ ಅವರು ಒಟ್ಟು 39 ಹಸು ಹಾಗೂ ಕರುಗಳು ಸಾಕುತ್ತಿದ್ದಾರೆ. 20 ಹಸುಗಳಲ್ಲಿ 14 ಹಾಲು ಕೊಡುವ ಹಸುಗಳು. ಪ್ರತೀದಿನ 140 ರಿಂದ 15೦ಲೀ ಹಾಲು ಸಂಘಕ್ಕೆ ನೀಡುತ್ತಾರೆ. ಕೆಲವು ಮಂದಿಗೆ ಉದ್ಯೋಗ ಅವಕಾಶವನ್ನು ಒದಗಿಸಿದ್ದಾರೆ.

ದನಗಳಿಗೆ ಬೇಕಾದ ಪಶು ಆಹಾರವನ್ನು ಮನೆಯಲ್ಲಿ ತಯಾರಿಸಿಕೊಳ್ಳುತ್ತಿದ್ದು ಹಸಿಹುಲ್ಲು ಮೇವಿಗಾಗಿ ಎರಡುವರೆ ಎಕ್ರೆಯಲ್ಲಿ ಹುಲ್ಲು ಬೆಳೆದಿದ್ದಾರೆ. ಭತ್ತದ ಗದ್ದೆಗಳು ಕಣ್ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ಭತ್ತದ ಕೃಷಿಗೆ ಆದ್ಯತೆ ನೀಡುತ್ತಾ ಅದರಲ್ಲಿ ಒಣ ಹುಲ್ಲು ಹಸುಗಳಿಗೆ ಬೇಕಾದಷ್ಟು ಪ್ರಮಾಣದ ದೊರೆಯುತ್ತದೆ. ಹಸುಗಳ ಗೊಬ್ಬರ ತೋಟಕ್ಕೆ ಸಾಕಷ್ಟು ಸಿಗುವುದರಿಂದ ಬೇರೆ ಗೊಬ್ಬರ ಖರೀದಿಗೆ ಹಣ ಸುರಿಯಬೇಕಿಂದಿಲ್ಲ. ನೀರು ಹೈನುಗಾರಿಕೆಗೆ ಬಹು ಮುಖ್ಯ. ನೀರಿಗೆ ಬೋರ್ವೆಲ್ ಹಾಗೂ ಬಾವಿ ವ್ಯವಸ್ಥೆಯಿದ್ದರೂ ಹೊಳೆಯೂ ಪಕ್ಕದಲ್ಲಿದೆ. ಹೈನುಗಾರಿಕೆ ಬೆಳೆಯಲು ಉಳಿಯಲು ಮುಖ್ಯವಾಗಿ ಆ ಕೆಲಸವನ್ನು ಇಷ್ಟಪಟ್ಟು ಮಾಡಬೇಕು. ಹಸಿರುಮೆವು, ಸಾಕಷ್ಟು ನೀರು, ಆ ಕೆಲಸದ ಮೇಲೆ ಪ್ರೀತಿ ಹಾಗೂ ಇಚ್ಛಾಶಕ್ತಿ ಇದ್ದಲ್ಲಿ ಹೈನುಗಾರಿಕೆ ಖಂಡಿತ ನಷ್ಟದಾಯಕವಲ್ಲ. 365 ದಿನವೂ ರಜೆ ತೆಗೆದುಕೊಳ್ಳದೆ ಬದ್ಧತೆಯಿಂದ ಮಾಡಬೇಕಾದ ಕೆಲಸವಿದು. ಅನಿವಾರ್ಯತೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಎನ್ನುತ್ತಾರೆ ಸುಭದ್ರಾ ರವ್.

ಕನಿಷ್ಠ ಸಂಬಳವಾದರೂ ಸಾಕು. ಕಚೇರಿಗಳಲ್ಲೇ ಕೆಲಸಬೇಕು ಎಂದು ನಗರದತ್ತ ಮುಖ ಮಾಡುವವರು ಹೆಚ್ಚಾಗುತ್ತಿದ್ದಾರೆ. ಹಾಗಾಗಿ ಹೈನುಗಾರಿಕೆಗೆ ನಮ್ಮಲ್ಲಿ ಹಿನ್ನಡೆಯಾಗುತ್ತಿದೆ. ಬಹಳಷ್ಟು ಮಂದಿ ರೈತರಿಗೆ ಅವರ ಮಕ್ಕಳು ರೈತರಾಗುವ ಮನಸ್ಸಿಲ್ಲ. ಹೈನುಗಾರಿಕೆ ನನಗೆಲ್ಲವನ್ನು ಕೊಟ್ಟಿದೆ. ಸುರತ್ಕಲ್ಲಿನಂತಹ ಪಟ್ಟಣದಿಂದ ಕೃಷಿ ಮನೆತನಕ್ಕೆ ಬಂದವಳು. ಇವತ್ತು ಇದೇ ಕೃಷಿ ಹೈನುಗಾರಿಕೆಯಿಂದ ಹಾಲು ಒಕ್ಕೂಟದ ನಿರ್ದೇಶಕಿಯಾಗುವ ವರೆಗೆ ಬೆಳೆದಿದ್ದೇನೆ ಎನ್ನುವ ರಾವ್ ಅವರು ನನಗೆ ಹೈನುಗಾರಿಕೆಯಿಂದ ನಷ್ಟ ಇಲ್ಲ. ನಾನು ತುಂಬಾ ಕರುಗಳನ್ನು ಸಾಕುತ್ತಿದ್ದೇನೆ. ಅದು ಅನುತ್ಪಾದಕ. ಹಾಗಾಗಿ ಲಾಭದ ಅಂಶವನ್ನು ಅಲ್ಲಿ ಕಳೆದುಕೊಳ್ಳುತ್ತಿದ್ದೇನೆ. ಆದರೆ ಬೇಸರ ಇಲ್ಲ. ಅವುಗಳು ನನ್ನ ಆಸ್ತಿ ಅಂತ ತಿಳಿದುಕೊಳ್ಳುತ್ತೇನೆ. ಎಂಬ ಅಭಿಮಾನ ಅವರಲ್ಲಿದೆ.

ಪ್ರಶಸ್ತಿಗಳು : ಹೈನುಗಾರಿಕೆಯಲ್ಲಿ ಮಾಡಿದ ಸಾಧನೆಗಾಗಿ ಅವರಿಗೆ ಹಲವು ಪ್ರಶಸ್ತಿಗಳು ಸಂದಿವೆ. ಉತ್ತಮ ಕಾರ್ಯಸಾಧನೆಗೆ ಉತ್ತಮ ಹಾಲು ಉತ್ಪಾದಕರ ಸಂಘ ಪ್ರಶಸ್ತಿಗೂ ಪಾತ್ರವಾಗಿದೆ. ಒಕ್ಕೂಟದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಒಕ್ಕೂಟದಿಂದ ಹೈನುಗಾರರಿಗೆ ದೊರೆಯುವ ಸವಲತ್ತುಗಳನ್ನು ಒದಗಿಸುವಲ್ಲಿ ಸಹಕರಿಸುತ್ತಿದ್ದಾರೆ.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group