spot_img
Friday, November 22, 2024
spot_imgspot_img
spot_img
spot_img

ಡ್ರ್ಯಾಗನ್ ಫ್ರೂಟ್ ಬಗ್ಗೆ ಒಂದಷ್ಟು: ಹೇಗೆ ಬೆಳೆಯೋದು?ಲಾಭ ಎಷ್ಟು?

ಕೆಲವು ಹಣ್ಣುಗಳು ಎಲ್ಲ ಕಡೆಯಲ್ಲಿಯೂ ಸಿಗುವುದಿಲ್ಲ. ಸಿಕ್ಕರೂ ವಿಪರೀತ ದುಬಾರಿ. ಅವುಗಳಿಂದ ಆರೋಗ್ಯಕ್ಕೆ ಬಹಳಷ್ಟು ಲಾಭವಿರುತ್ತವೆ. ಅಂತಹ ಹಣ್ಣುಗಳಲ್ಲಿ ಡ್ರ್ಯಾಗನ್ ಹಣ್ಣು ಕೂಡ ಒಂದು.

ಡ್ರ್ಯಾಗನ್ ಹಣ್ಣು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ರುಚಿಕರ ಮತ್ತು ಆರೋಗ್ಯಕರ ಹಣ್ಣು. ಅಮೇರಿಕಾ, ಮೆಕ್ಸಿಕೋದ ಮರಭೂಮಿಗಳಲ್ಲಿ ಈ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ವಿದೇಶದ ಈ ಹಣ್ಣು ಇತ್ತೀಚೆಗೆ ಮಾರ್ಕೆಟ್‌ಗಳಲ್ಲಿ ಹೇರಳವಾಗಿ ಲಭ್ಯವಿದೆ.ಇತ್ತೀಚೆಗೆ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಇದನ್ನು ಬೆಳೆಯುವ ಕುರಿತು ಕೃಷಿಕರು ಆಸಕ್ತಿ ತೋರಿಸುತ್ತಿದ್ದಾರೆ. ಹಾಗಾದ್ರೆ ಈ ಬೆಳೆಯ ಕುರಿತು ಒಂದಷ್ಟು ತಿಳಿದುಕೊಳ್ಳೋಣ.

ಡ್ರ‍್ಯಾಗನ್ ಹಣ್ಣಿನ ಲಾಭಗಳು:
ಡ್ರ‍್ಯಾಗನ್ ಹಣ್ಣಿನಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಕೊಲೆಸ್ಟ್ರಾಲ್ ಇದೆ. ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದು ಹಾಕುವ ಸಾಮರ್ಥ್ಯವಿದೆ.
ಕರಗದ ಕೊಬ್ಬಿನ ಪ್ರಮಾಣವನ್ನು ತಗ್ಗಿಸಿ ಹೃದಯದ ಸ್ವಾಸ್ಥ್ಯ ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ. ಇದರಲ್ಲಿ ಹೆಚ್ಚಿನ ಫೈಬರ್ ಅಂಶವಿರುವುದರಿಂದ ದೇಹದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುವುದರ ಜೊತೆಗೆ ದೇಹದ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಿಸುತ್ತದೆ.

ಡ್ರ‍್ಯಾಗನ್ ಫ್ರೂಟ್ ಕೃಷಿ – ಬಂಡವಾಳ ಮತ್ತು ಖರ್ಚು :
ಒಂದು ಎಕರೆ ಡ್ರ‍್ಯಾಗನ್ ಫ್ರೂಟ್ ಬೇಸಾಯ ಕೈಗೊಳ್ಳಲು ಆರಂಭಿಕ ಬಂಡವಾಳ 3- 5 ಲಕ್ಷ ರೂ. ಬೇಕಾಗುವುದು. ಎಕರೆಗೆ 5೦೦ ಕಂಬಗಳನ್ನು ನಿಲ್ಲಿಸಬಹುದು.
ಡ್ರ‍್ಯಾಗನ್ ಫ್ರೂಟ್ ಗಿಡ ಬೆಳೆಸಲು ಆಧಾರವಾಗಿ ಕಂಬ ಬೇಕು. ಒಂದು ಕಂಬಕ್ಕೆ 4 ಗಿಡ ನಾಟಿ ಮಾಡಬೇಕು. ನಾಟಿ ಮಾಡಿದ 15 ತಿಂಗಳಿಂದ ಇಳುವರಿ ಆರಂಭವಾಗುತ್ತದೆ. ಮೊದಲ ಬೆಳೆ ಸರಾಸರಿ 1.5 ಟನ್ ಸಿಗುತ್ತದೆ. 3ನೇ ವರ್ಷದ ನಂತರ 5 ರಿಂದ 6 ಟನ್ ಇಳುವರಿ ನಿರೀಕ್ಷಿತ. ವಾರ್ಷಿಕ ಬೆಳೆ ನಿರ್ವಹಣೆ ವೆಚ್ಚ ಎಕರೆಗೆ 10 ಸಾವಿರ ರೂಪಾಯಿ.

ಒಂದು ಕೆಜಿ ಹಣ್ಣಿನ ಬೆಲೆ 8೦ ರಿಂದ 15೦ ರೂ.ವರೆಗೆ ಇದೆ. ಹೂವಾದ 4೦ ರಿಂದ 45 ದಿನಕ್ಕೆ ಹಣ್ಣು ಕಟಾವಿಗೆ ತಯಾರಾಗುತ್ತದೆ. ಹಸಿರು ವರ್ಣದ ಕಾಯಿ ಮಾಗುತ್ತಿದ್ದಂತೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ನಂತರ 3 ರಿಂದ 4 ದಿನಗಳಲ್ಲಿ ಕಟಾವು ಮಾಡಬಹುದು.
ಕಾಯಿ ತೂಕ ಸರಾಸರಿ 350 ರಿಂದ 5೦೦ ಗ್ರಾಂ. 4೦೦ ಗ್ರಾಂ ಮೇಲ್ಪಟ್ಟು ತೂಗುವ ಕಾಯಿಗಳು ಮೊದಲ ದರ್ಜೆ ದರ ಪಡೆದರೆ ಉಳಿದವು ಕಡಿಮೆ ದರ ಪಡೆಯುತ್ತವೆ.

ಡ್ರ‍್ಯಾಗನ್ ಹಣ್ಣಿನ ತಳಿಗಳು ಅಂತಾರಾ‍ಷ್ಟ್ರೀಯ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲು ಸಿದ್ಧವಾಗಿದೆ. ಒಂದು ಕೆಜಿಗೆ ರೂ. 150 ರಂತೆ (3 ಹಣ್ಣು) ಮಾರಾಟ ಮಾಡಲು ಸಿದ್ಧಗೊಂಡಿರುತ್ತದೆ.

ಆದಾಯ: ಒಂದು ಗಿಡದಿಂದ 5 ಕೆಜಿ, 2೦೦೦ ಗಿಡದಿಂದ ಒಂದು ಎಕೆರೆಗೆ 1೦ ಟನ್, ರೂ 150/ ಕೆಜಿಯಂತೆ ಒಂದು ಎಕರೆಗೆ ರೂ 15 ಲಕ್ಷ ಆದಾಯ ಪಡೆಯಬಹುದು.

ಹಣ್ಣಿನ ಉಪಯೋಗಗಳು :
ಈ ಹಣ್ಣು ಕಡಿಮೆ ಕ್ಯಾಲೋರಿಯನ್ನು ಹೊಂದಿದೆ. ನಾರಿನಾಂಶವೂ ಅಧಿಕವಾಗಿದ್ದು, ಕಬ್ಬಿಣ, ಪ್ರೋಟೀನ್, ಕಾರ್ಬೋಹೈಡ್ರೇಟ್, ಮೆಗ್ನೀಸಿಯಮ್, ವಿಟಮಿನ್ ಸಿ, ವಿಟಮಿನ್ ಇ, ಕ್ಯಾರೋಟಿನಾಯ್ಡ್ಗಳು, ಪಾಲಿಫಿನಾಲ್‌ಗಳಂತಹ ಅಮೂಲ್ಯ ಪೋಷಕಾಂಶಗಳನ್ನು ಹೊಂದಿದೆ.
ಹಣ್ಣಿನ ಬೆಲೆ ಹೆಚ್ಚಾಗಿದ್ದರೂ, ಇದು ದೇಹಕ್ಕೆ ಶಕ್ತಿ ಹೆಚ್ಚಿಸುವ ಪೋಷಕಾಂಶಗಳನ್ನು ಒದಗಿಸುತ್ತದೆ. ರೋಗಗಳನ್ನು ದೂರವಿಡುವ ಹಣ್ಣು. ಹಣ್ಣಿನ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಡ್ರ್ಯಾಗನ್ ಹಣ್ಣಿನಲ್ಲಿ ನೈಸರ್ಗಿಕವಾಗಿ ಕಂಡುಬರುವ ಉತ್ಕರ್ಷಣ ನಿರೋಧಕಗಳು, ಹೃದ್ರೋಗ, ಕ್ಯಾನ್ಸರ್ ಮತ್ತು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸುವ ಅಂಶಗಳಿವೆ.
ಪ್ರತಿರಕ್ಷಣಾ ಅಂಶವನ್ನು ಹೊಂದಿದೆ. ಈ ಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಕ್ಯಾರೋಟಿನಾಯ್ಡಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಬಿಳಿ ರಕ್ತ ಕಣಗಳನ್ನು ರಕ್ಷಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ದೇಹದಲ್ಲಿ ಹೆಚ್ಚಿಸುತ್ತದೆ. ಇದು ಸೋಂಕು ಅಥವಾ ಇತರೆ ಯಾವುದೇ ಕಾಯಿಲೆಗಳು ನಮ್ಮನ್ನು ಹಾನಿ ಮಾಡದಂತೆ ತಡೆಯುತ್ತದೆ.
ಈ ಹಣ್ಣು ತಿನ್ನುವದರಿಂದ ಕಬ್ಬಿಣದ ಕೊರತೆಯನ್ನು ನಿವಾರಿಸಬಹುದು.
ಇತರೇ ಎಲ್ಲಾ ಹಣ್ಣುಗಳಿಗೆ ಹೋಲಿಸಿದರೆ ಡ್ರ್ಯಾಗನ್ ಹಣ್ಣಿನಲ್ಲಿ ಮೆಗ್ನೀಸಿಯಮ್ ಅಧಿಕವಾಗಿರುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಅತ್ಯುತ್ತಮವಾಗಿದೆ.

ಬರಹ:ಡಾ. ಶಶಿಕುಮಾರ್ ಎಸ್. ಪ್ರಾಧ್ಯಾಪಕರು ಹಾಗೂ ಸಂಪಾದಕರು, ಸಂವಹನ ಕೇಂದ್ರ ತೋವಿವಿ, ಬಾಗಲಕೋಟ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group