spot_img
Saturday, November 23, 2024
spot_imgspot_img
spot_img
spot_img

ಅಧ್ಯಾಪನದ ಕನಸು, ತರಕಾರಿ ಕೃಷಿಯಲ್ಲಿ ಯಶಸ್ಸು:ಪುತ್ತೂರಿನ ಯಶಸ್ವಿ ಮಹಿಳೆಯ ಯಶೋಗಾಥೆ

ಈಕೆ ಓದಿದ್ದು ಬಿಬಿಎಂ, ಎಲ್‌ಎಲ್‌ಬಿ, ಎಂಎ, ಬಿ.ಎಡ್ ಕಾಯಕದಲ್ಲಿ ಕೃಷಿ. ವೃತ್ತಿಯಲ್ಲಿ ಟೀಚರ್ ಆಗಿ ಕೆಲಸ ಮಾಡಬೇಕೆಂಬ ಕನಸು ಹೊತ್ತವರು. ಒಂದು ವರ್ಷ ಸರಕಾರಿ ಶಾಲೆ, ಕಾಲೇಜಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ತನ್ನ ಮಗನ ಮುಂದಿನ ಓದಿಗಾಗಿ ಅವನ ಭವಿಷ್ಯಕ್ಕಾಗಿ ಕೆಲಸಕ್ಕೆ ವಿರಾಮವನ್ನು ಕೊಟ್ಟರು. ಮನೆಯಲ್ಲಿ ಕುಳಿತು ಆನ್ಲೈನ್ ಪಾಠ ಮಾಡುತ್ತಿದ್ದರು. ಉತ್ತಮ ಉಪನ್ಯಾಸಕಿ ಎಂಬ ಬಿರುದು ಬಂದಿತ್ತು. ಬಿಡುವಿನ ವೇಳೆ ತಮ್ಮ ಮನೆ ಬಳಕೆಗಾಗಿ ತರಕಾರಿ ಕೃಷಿ ಮಾಡುವುದರತ್ತ ಗಮನ ಹರಿಸಿದರು. ಇದೀಗ ಮನೆಯ ಆಗುಹೋಗುಗಳನ್ನು ನಿಭಾಯಿಸಿದ ಬಳಿಕ ತರಕಾರಿ ಕೃಷಿಯತ್ತ ಹೆಚ್ಚು ಒಲವು ಮೂಡಿಸಿಕೊಂಡಿದ್ದಾರೆ ಶ್ರೀಮತಿ ಸ್ವರ್ಣಶ್ರೀ ಪಟ್ಟೆ

ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಕೃಷಿ ಮನೆತನದವರಾದ ಶಿರೀಶ್ ಪಟ್ಟೆ ಅವರ ಪತ್ನಿ ಶ್ರೀಮತಿ ಸ್ವರ್ಣಶ್ರೀ ಪಟ್ಟೆ ಕೂಡ ಕೃಷಿಕ ಕುಟುಂಬದಿಂದಲೇ ಬಂದವರು. ಚಿಕ್ಕಂದಿನಿಂದಲೂ ಕೃಷಿಯಾಸಕ್ತಿ ಬೆಳೆಸಿಕೊಂಡಿದ್ದವರು. ಶಿರೀಷ್ ಪಟ್ಟೆ ಪಟ್ಟಣದಲ್ಲಿ ನೌಕರಿಯಲ್ಲಿದ್ದರು. ಅನಿವಾರ್ಯವಾಗಿ ಮತ್ತೆ ಕೃಷಿಕ್ಷೇತ್ರಕ್ಕೆ ಬಂದು ಪ್ರಗತಿಪರ ಕೃಷಿಕರಾದವರು. ಪತಿ ಹಾಗೂ ಅತ್ತೆಯ ಪ್ರೋತ್ಸಾಹದಿಂದ ತರಕಾರಿ ಕೃಷಿಯಲ್ಲಿ ನಿರತರಾದ ಸ್ವರ್ಣ ಶ್ರೀ ತರಕಾರಿ ಬೀಜ ಬಿತ್ತನೆಯಿಂದ ಬೆಳೆ ಶೇಖರಣೆ ವರೆಗೆ ಹಲವು ಪದ್ಧತಿಗಳನ್ನು ಕ್ರೂಡೀಕರಿಸಿ ಸಾವಯವದಲ್ಲೇ ತರಕಾರಿ ಕೃಷಿ ಮಾಡುತ್ತಿದ್ದಾರೆ. ಬಸಳೆ ಬೆಳೆಸಲು ಚಪ್ಪರವೇ ಹಾಕಿಲ್ಲ. ನೆಲದಲ್ಲಿ ಹಬ್ಬುವಂತೆ ಅಥವಾ ಗೋಡೆಗಳ ಆಧಾರದಿಂದ ಮೇಲೆ ಹೋಗುವಂತೆ ಬೆಳಸಬಹುದು ಎನ್ನುತ್ತಾರೆ.

ತೊಂಡೆ ಬಳ್ಳಿಗೂ ಚಪ್ಪರ ಹಾಕಬೇಕಾಗಿಲ್ಲ. ಮೂರು ಕಂಬಗಳು ನೆಟ್ಟು ಅದಕ್ಕೆ ಬಲೆಯ ಹೊದಿಕೆ ಹಾಕಿ ನಂತರ ಬಳ್ಳಿ ಮೇಲೆ ಹಬ್ಬಲು ಸಹಾಯ ಮಾಡಬೇಕು. ಇದರಿಂದ ತೊಂಡೆಕಾಯಿ ಕೊಯ್ಲು ಮಾಡಲು ತುಂಬಾನೇ ಸಹಾಯ ಆಗುತ್ತೆ. ಇದೇ ರೀತಿ ಪಡವಲವನ್ನು ಬೆಳೆಸಬಹುದು.

ಬೇಸಗೆಯ ಬದನೆಯ ಸಸಿಯನ್ನು ಮಳೆಗಾಲದಲ್ಲೂ ಉಳಿಸಿ ಬೆಳೆಸಬಹುದು. ಅದರ ಗೆಲ್ಲನ್ನು ಸವರಿ ಬುಡವನ್ನು ಬಿಡಿಸಿ ಹಟ್ಟಿ ಗೊಬ್ಬರವನ್ನು ಹಾಕಬೇಕು. ಈ ಸಸಿಗಳು ಮೊಳಕೆ ಬಂದು ಮೂರು ಎಲೆ ಮೂಡುವಾಗ ಕೆಂಪು ಹುಳು ಸೇರಿಕೊಂಡರೆ ಅದಕ್ಕೆ ಒಂದು ಲೀಟರ್ ನೀರಿಗೆ ಐದು ಬಿಂದು ಕಹಿಬೇವಿನ ಎಣ್ಣೆ ಹಾಕಿ ಸ್ಪ್ರೇ ಮಾಡಿದಾಗ ಸಸಿಗಳು ಹುಲುಸಾಗಿ ಬೆಳೆಯುತ್ತದೆ. ಎರಡು ದಿನಕ್ಕೊಮ್ಮೆ ಸ್ಪ್ರೇ ಮಾಡಿ ನಂತರ ಬುಡಕ್ಕೆ ಸಗಣಿ ನೀರು ಹಾಕಿ ಹುಳಿ ಮಜ್ಜಿಗೆಗೆ ನೀರು ಸೇರಿಸಿ ಬುಡಕ್ಕೆ ಹಾಕಿ. ಹೀಗೆ ಮಾಡಿದರೆ ಗಿಡಗಳು ಬೇಗನೆ ಬೆಳೆಯುತ್ತೆ.ಇಲ್ಲವೇ ಅಕ್ಕಿತೊಳೆದ ನೀರು ಹಾಕಬಹುದು

ಅಂಥೋರಿಯಂ ಅನ್ನು ಶೇಡ್‌ನೆಟ್ಟಿನಲ್ಲಿ ಅಥವಾ ನೆರಳಿನಲ್ಲಿ ಬೆಳೆಸಬೇಕು. ೧೫ ದಿನಕ್ಕೊಮ್ಮೆ ಸಗಣಿ ನೀರು ಕೊಡುತ್ತಿರಬೇಕು. ರೋಗ ಬರದಂತೆ ತಡೆಯಲು ಕಹಿಬೇವಿನ ಹಿಂಡಿ ನೀರು ಹಾಕಿದರೆ ಒಳ್ಳೆಯದು. ವರ್ಷಕ್ಕೊಮ್ಮೆ ಗಿಡಗಳನ್ನು ಬೇರೆ ಕುಂಡಗಳಿಗೆ ವರ್ಗಾಯಿಸುವುದು ಒಳ್ಳೆಯದು.
ಅಂಥೋರಿಯಂ ಗಿಡಗಳನ್ನು ಅವರು ಮಾರಾಟ ಮಾಡುತ್ತಾರೆ. ತರಕಾರಿಯನ್ನು ಮನೆಬಳಕೆಗೆ ಬೇಕಾಗುವಷ್ಟು ಇರಿಸಿಕೊಂಡು ಉಳಿದದ್ದನ್ನು ಬಂಧುಗಳಿಗೆ, ನೆರೆಹೊರೆಯವರಿಗೆ ಹಾಗೂ ತಮ್ಮ ತೋಟದ ಕೆಲಸಗರರಿಗೆ ಸಂತೃಪ್ತರಾಗುತ್ತಾರೆ.

-ಆಶಾ ನೂಜಿ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group