spot_img
Wednesday, January 15, 2025
spot_imgspot_img
spot_img
spot_img

ಪಟ್ಟಣವೆಂಬ ಮರುಭೂಮಿಯಲ್ಲಿ ಓಯಸಿಸ್ ಈ ತಾರಸಿ ಕೈತೋಟ: ಈ ಮಳೆಗಾಲದಲ್ಲಿ ನಿಮ್ಮ ತಾರಸಿಯಲ್ಲಿ ಕಂಗೊಳಿಸಲಿ ಕೈತೋಟ

ಮನುಷ್ಯನು ನಗರ ಯಾ ಹಳ್ಳಿಯಲ್ಲಿ ವಾಸಿಸಿದರೂ ತರಕಾರಿ ಹಾಗೂ ಆಹಾರವನ್ನು ಬಿಟ್ಟು ಬದುಕಲಾಗದು. ಇವುಗಳೆಲ್ಲದರ ಮೂಲವೇ ಕೃಷಿ. ನಗರೀಕರಣದ ಧಾವಂತದಲ್ಲಿ ಕೃಷಿ ಭೂಮಿಗಳೇ ಮಾಯವಾಗುತ್ತಿದ್ದು, ಇನ್ನು ಆಹಾರ ಪದಾರ್ಥಗಳನ್ನು ಬೆಳೆಯುವುದು ಸಾಧ್ಯವಿಲ್ಲ. ಪಟ್ಟಣದ ಸಮೀಪವಿದ್ದ ಕೃಷಿ ಭೂಮಿಗಳು ಕಟ್ಟಡಳಿಗೆ, ಕಚೇರಿಗಳಿಗೆ ಮತ್ತು ಕಾರ್ಖಾನೆಗಳಿಗೆ ಬಳಕೆಯಾಗಿದೆ.

ಮಿತಿಮೀರಿದ ಅಭಿವೃದ್ಧಿ ಭೂಮಿಯ ಹಸಿರು ಹೊದಿಕೆಯನ್ನು ಕಬಳಿಸುತ್ತಿದೆ. ದಿನದಿಂದ ದಿನಕ್ಕೆ ತಾಪಮಾನ, ವಾಯುಮಾಲಿನ್ಯ ಉಸಿರುಗಟ್ಟಿಸುತ್ತದೆ. ವೈದ್ಯಶಾಸ್ತ್ರ ಹೇಳುತ್ತದೆ, ಮನುಷ್ಯನ ದಿನನಿತ್ಯದ ಆಹಾರದಲ್ಲಿ ಕನಿಷ್ಠ 285  ರಿಂದ 3೦೦ ಗ್ರಾಂ ತರಕಾರಿ, ಅದರಲ್ಲೂ 115 -225 ಗ್ರಾಂ ಸೊಪ್ಪು ತರಕಾರಿ, 85  ಗ್ರಾಂ ಗೆಡ್ಡೆ ತರಕಾರಿ, 85 ಗ್ರಾಂ ಇತರೆ ತರಕಾರಿಗಳು ಹಾಗೂ 85 ಗ್ರಾಂ ಹಣ್ಣು ಹಂಪಲಿನಿಂದ ಕೂಡಿರಬೇಕು ಎಂದು. ಆದರೆ ಮಾರುಕಟ್ಟೆಯಲ್ಲಿ ದೊರೆಯುವ ತರಕಾರಿಗಳನ್ನು ಹೆಚ್ಚಿನ ಪ್ರಮಾಣದ ರಾಸಾಯನಿಕ ಮತ್ತು ಕೀಟನಾಶಕಗಳನ್ನು ಬಳಸಿ ಬೆಳೆದಿರುವುದರಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅದಕ್ಕಾಗಿ ಪ್ರತಿ ಕುಟುಂಬಗಳೂ ತಾವು ಸೇವಿಸುವ ತರಕಾರಿಗಳನ್ನು ತಾವೇ ಸ್ವತಃ ಬೆಳೆದುಕೊಳ್ಳುವ ಮೂಲಕ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

 ಷ

ಕೈತೋಟ ಮಾಡಲು ಸ್ಥಳ ಇಲ್ಲದ ಪಕ್ಷದಲ್ಲಿ ಮನೆಯ ತಾರಸಿ ಮೇಲೆ ಕುಂಡಗಳಲ್ಲಿ ಸುಲಭವಾಗಿ ಬೆಳೆಯಲು ಅವಕಾಶವಿದೆ. ಇಂತಹ ಪರಿಸ್ಥಿತಿಯಲ್ಲಿ ಹಸಿರು ಹೊದಿಕೆಯನ್ನು ಪ್ರೇರೇಪಿಸಲು ಕಾಂಕ್ರಿಟ್ ಕಾಡಿನಲ್ಲಿಯೇ ‘ತಾರಸಿ ಕೈತೋಟ’ ವಿಭಿನ್ನ ಪರಿಕಲ್ಪನೆಗೆ ಹೆಚ್ಚು ಮೌಲ್ಯ ದೊರೆತಿದೆ.

ಅದರಲ್ಲಿ ಬಹು ಮುಖ್ಯವಾಗಿ ಮನೆಯ ದಿನಬಳಕೆಯ ವಸ್ತುಗಳಾದ ದವಸ ಧಾನ್ಯಗಳು, ಕಾಳುಕಡಿ, ಎಣ್ಣೆ ಕಾಳುಗಳು, ಹಾಲು ಮತ್ತು ತರಕಾರಿ ಇತ್ಯಾದಿಗಳನ್ನು ದುಡ್ಡುಕೊಟ್ಟು ಹೊರಗಡೆಯಿಂದ ಖರೀದಿಸಿ ಬಳಸುವ ಬದಲು ಅವುಗಳನ್ನೆಲ್ಲಾ ತನ್ನ ಕೃಷಿ ಜಮೀನಿನಲ್ಲೇ ಉತ್ಪಾದಿಸಲು ಯಾ ಬೆಳೆಯಲು ಸಾಧ್ಯವಿದೆ. ಈ ಪರಿಕಲ್ಪನೆಯು ಹಳ್ಳಿಗಳಲ್ಲಿ ಮತ್ತು ಜಮೀನು ಇರುವವರಿಗೆ ಸೂಕ್ತವಾಗಿದೆ. ಆದರೆ ನಗರಗಳು ಮತ್ತು ಅಪಾರ್ಟ್ಮೆಂಟ್‌ಗಳಲ್ಲಿ ವಾಸಿಸುವವರಿಗೆ ತುಸು ಕಷ್ಟವೇ ಸರಿ. ಹಾಲನ್ನು ಪಟ್ಟಣವಾಸಿಗಳಿಗೆ ಸ್ವತಃ ಉತ್ಪಾದಿಸುವುದು ಕಷ್ಟವಾದರೂ ಇತರ ದಿನಬಳಕೆಯ ವಸ್ತುಗಳಾದ ದವಸ ಧಾನ್ಯಗಳು, ಕಾಳುಕಡಿ, ಎಣ್ಣೆ ಕಾಳುಗಳು ಮತ್ತು ತರಕಾರಿ ಇತ್ಯಾದಿಗಳನ್ನು ತನ್ನ ಮನೆಯ ಟೆರೇಸ್ ಮೇಲೂ ಬೆಳೆದುಕೊಳ್ಳಲು ಅವಕಾಶವಿದ್ದು, ಈ ಪದ್ಧತಿಗೆ ‘ಟೆರೇಸ್ ಗಾರ್ಡನಿಂಗ್’ ಎಂದು ಕರೆಯಲಾಗುತ್ತದೆ.

ಮನೆಯ ತಾರಸಿಯಲ್ಲಿ ತೋಟವ ಮಾಡಿ ನೋಡಿ:

ಪಟ್ಟಣಗಳಲ್ಲಿ ಹಸಿರು ಎನ್ನುವುದು ಬಿಸಿಲು ಕುದುರೆಯೇ ಸರಿ. ಪಟ್ಟಣಗಳಲ್ಲಿ ಸುಡುವ ಬಿಸಿಲನ್ನು ತಡೆಯುವ ಮರಗಿಡಗಳು ಕಾಣಸಿಗುವುದೇ ಅಪರೂಪ. ಇಂತಹ ಪಟ್ಟಣಗಳಲ್ಲಿ ಪ್ರತಿಯೊಬ್ಬ ನಿವಾಸಿಗಳೂ ತಮಗೆ ಲಭ್ಯವಿರುವ ಸಣ್ಣ ಅವಕಾಶದಲ್ಲಿ ಹಸಿರಿನ ವೈಭವವನ್ನು ನಿರ್ಮಿಸಲು ಸಾದ್ಯವಿದೆ. ಮನೆಯ ಮುಂದೆ ಮತ್ತು ಮನೆಯ ತಾರಸಿಯ ಮೇಲು ಹಸಿರನ್ನು ಮೂಡಿಸಬಹುದು. ತಾರಸಿಯ ಮೇಲೆ ವೈವಿಧ್ಯಮಯ ತರಕಾರಿಗಳು, ಹಣ್ಣುಗಳು, ಔಷಧೀಯ ಸಸ್ಯಗಳು, ಹೂವುಗಳನ್ನು ಬೆಳೆಯಲು ಅವಕಾಶವಿದೆ. ಆಸಕ್ತಿ ಎನ್ನುವ ಮೂರಕ್ಷರ ವ್ಯಕ್ತಿಯ ಮನದಾಳದಲ್ಲಿ ಇದ್ದರೆ ಮನೆಯ ಮಹಡಿ ಮೇಲೆ ಸಣ್ಣ ಪ್ರಮಾಣದ ಕೃಷಿ ಕ್ರಾಂತಿಯನ್ನೇ ಮಾಡಬಹುದು. ಈ ರೀತಿ ಮಾಡಿದಾಗ ಪಟ್ಟಣವಾಸಿಗಳು ಮನೆಗೆ ಅಗತ್ಯವಿರುವ ರಾಸಾಯನಿಕಯುಕ್ತ ತರಕಾರಿಗಳನ್ನು ಹೊರಗಡೆ ಖರೀದಿಸುವ ಬದಲು ಸಾವಯವ ರೀತಿಯಲ್ಲೇ ಮನೆಯಲ್ಲೇ ಬೆಳೆಯಬಹುದು.

ತಾರಸಿ ತೋಟದ ಪ್ರಮುಖ ಉದ್ದೇಶಗಳು:
• ಸಾವಯವ ಪದ್ದಧತಿಯಲ್ಲಿ ಮನೆಗೆ ಅಗತ್ಯವಿರುವ ಕೃಷಿ ಉತ್ಪನ್ನಗಳನ್ನು ಬೆಳೆದುಕೊಳ್ಳುವುದು.
• ಮನೆಯ ನಿರುಪಯುಕ್ತ ತ್ಯಾಜ್ಯಗಳ ಸಮರ್ಪಕ ವಿಲೇವಾರಿ.
• ಮನೆಯ ತ್ಯಾಜ್ಯಗಳಿಂದ ತಯಾರಿಸಿದ ಸಾವಯವ ಗೊಬ್ಬರದ ಬಳಕೆಯ ಮೂಲಕ ಸಂಪೂರ್ಣ ಸಾವಯವ ತರಕಾರಿಗಳನ್ನು ಬೆಳೆಯುವುದು.
• ಮನೆಯ ತ್ಯಾಜ್ಯಗಳಿಂದ ಮನೆಯಲ್ಲಿಯೇ ಎರೆಗೊಬ್ಬರ ಮತ್ತು ಕಾಂಪೋಸ್ಟ್ ಇತ್ಯಾದಿ ತಯಾರಿ.
• ಮನೆಯ ತಾರಸಿ ಮೇಲೆ ಬಿಳುವ ನೀರನ್ನು ಮಳೆ ನೀರು ಕೊಯ್ಲು ಪದ್ಧತಿಯಲ್ಲಿ ಸಂಗ್ರಹಿಸಿ ಕೃಷಿಗೆ ಬಳಕೆ ಮಾಡುವುದು.
• ಅಡುಗೆ ಮನೆಯಲ್ಲಿ ಬಳಕೆಯಾದ ನೀರನ್ನು ಮರುಬಳಕೆ ಮಾಡಿ ತಾಜಾ ತರಕಾರಿಗಳನ್ನು ಬೆಳೆಸುವುದು.
• ಕುಟುಂಬದ ಸದಸ್ಯರ ಆರೋಗ್ಯವನ್ನು ಕಾಪಾಡಲು ರಾಸಯನಿಕ ಮತ್ತು ಕೀಟನಾಶಕ ಮುಕ್ತ ತರಕಾರಿಗಳ ಬಳಕೆ.

ಗಮನಿಸಬೇಕಾದ ಅಂಶಗಳು:
• ಸ್ಥಳದ ಅಭಾವ ಹಾಗೂ ಜಾಗದ ಬೆಲೆ ಅಧಿಕವಿರುವುದರಿಂದ ನಗರಗಳಲ್ಲಿ ತರಕಾರಿ ಬೆಳೆಯಲು ತಾರಸಿ ಉತ್ತಮ ಅವಕಾಶವಾಗಿದೆ.
• ತಾರಸಿ ಕೃಷಿಗೆ ಬಳಕೆ ಮಾಡುವ ಕುಂಡಗಳು, ಮಣ್ಣು ಮತ್ತು ಗೊಬ್ಬರ ಕಡಿಮೆ ತೂಕ ಇರಬೇಕು.
• ತಾರಸಿ ಮೇಲ್ಛಾವಣಿಯಲ್ಲಿ ನೀರು ಸಂಪೂರ್ಣವಾಗಿ ತಾರಸಿಯಿಂದ ಬಸಿದು ಹೋಗುವ ವ್ಯವಸ್ಥೆ ಮಾಡಬೇಕು.
• ತಾರಸಿಯ ಮೇಲಕ್ಕೆ ಪ್ಲಾಸ್ಟಿಕ್ ಶೀಟನ್ನು ಹರಡಬೇಕು.
• ಬಹುವಾರ್ಷಿಕ ಗಿಡಗಳಾದ ಅಂಜೂರ, ಸಪೋಟ, ನಿಂಬೆ, ಕರಿಬೇವು, ನುಗ್ಗೆ, ದಾಳಿಂಬೆ ಇವುಗಳನ್ನು ಬೆಳೆಯುವ ಯೋಚನೆಯಿದ್ದರೆ, ದೊಡ್ಡ ಗಾತ್ರದ ಸಿಮೆಂಟ್ ಕುಂಡ ಅಥವಾ ಪ್ಲಾಸ್ಟಿಕ್ ಬ್ಯಾರಲ್‌ಗಳಲ್ಲಿ ಬೆಳೆಯಬೇಕು.

ಅಗತ್ಯವಿರುವ ಸಾಮಾಗ್ರಿಗಳು:
ತಾರಸಿಯಲ್ಲಿ ತರಕಾರಿಗಳನ್ನು ಬೆಳೆಯಲು ವಿವಿಧ ಗಾತ್ರದ ಮಣ್ಣಿನ ಕುಂಡಗಳು, ಪ್ಲಾಸ್ಟಿಕ್ ಕುಂಡಗಳು, ಫೈಬರ್ ಕುಂಡಗಳು, ಸಿಮೆಂಟ್ ಕುಂಡಗಳು, ಪ್ಯಾರಫಿನ್ ಬ್ಯಾಗ್‌ಗಳು ಮತ್ತು ತಾರಸಿ ಕೃಷಿಗೆಂದೇ ತಯಾರಿಸಲಾಗುವ ಗ್ರೋ ಬ್ಯಾಗ್‌ಗಳನ್ನು ಬಳಸಬಹುದು. ತರಕಾರಿಯನ್ನು ಬೆಳೆಯುವ ಕುಂಡಗಳಿಗೆ ೧:೨:೨ ಅನುಪಾತದಲ್ಲಿ ಮರಳು, ಕೆಂಪು ಮಣ್ಣು ಮತ್ತು ಎಲೆ ಗೊಬ್ಬರ, ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ, ಕೋಕೋಪಿಟ್, ಜೈವಿಕ ಗೊಬ್ಬರಗಳು, ಬೇವಿನ ಹಿಂಡಿ, ಆಯಿಲ್ ಕೇಕ್ಸ್ ಇವುಗಳಲ್ಲಿ ಯಾವುದಾದರೂ ಒಂದನ್ನು ಮಿಶ್ರಣ ಮಾಡಬೇಕು.

ಪಾಟಿಂಗ್ ಮಾಡುವ ವಿಧಾನ:
• ಪಾಟಿನ ನೀರು ಹೋಗುವ ರಂಧ್ರವನ್ನು ಮುರಿದ ಕುಂಡದ ಚೂರು/ ಜಲ್ಲಿಕಲ್ಲುಗಳಿಂದ ಮುಚ್ಚಬೇಕು.
• ಕುಂಡದ ಚೂರುಗಳನ್ನು ಮರಳಿನಿಂದ ಮುಚ್ಚಬೇಕು.
• ನಂತರ ಕುಂಡದಲ್ಲಿ ತುದಿಯವರೆಗೆ ಮಣ್ಣಿನ ಮಿಶ್ರಣವನ್ನು ತುಂಬಬೇಕು.
• ರಂಧ್ರದಿಂದ ನೀರು ಹೊರಬರುವವರೆಗೆ ನೀರನ್ನು ಹಾಕಬೇಕು.

ನಿರುಪಯುಕ್ತ ವಸ್ತುಗಳ ಬಳಕೆ:
ಮನೆಯಲ್ಲಿ ಬಳಸಿ ಬೇಡವೆಂದು ಬಿಸಾಕುವ ನಿರುಪಯುಕ್ತ ವಸ್ತುಗಳಾದ ನೀರಿನ ಬಾಟಲಿಗಳು, ಅಡುಗೆ ಎಣ್ಣೆಯ ಕ್ಯಾನುಗಳು, ದವಸ ಧಾನ್ಯಗಳ ಚೀಲಗಳು, ಒಡೆದ ಪಾತ್ರೆಗಳನ್ನು ಬಳಸಿಕೊಂಡು ಅದರಲ್ಲಿ ಬಗೆ ಬಗೆಯ ಬಳ್ಳಿಗಳು, ತರಕಾರಿ ಗಿಡಗಳನ್ನು ಬೆಳೆಯಬಹುದು. ಅಡುಗೆ ಮನೆಯ ತ್ಯಾಜ್ಯ, ಗಿಡಗಳಿಂದ ಉದುರುವ ಎಲೆಗಳನ್ನು ಬಳಸಿ ಗೊಬ್ಬರವನ್ನು ತಯಾರಿಸಿ ತಾರಸಿ ತೋಟದ ಸಸ್ಯಗಳಿಗೆ ಬಳಸಬಹುದು.

ಏನೇನು ಬೆಳೆಯಬಹುದು?
ಹಣ್ಣುಹಂಪಲು: ಅಲ್ಪಾವಧಿ ಹಣ್ಣಿನ ಬೆಳೆಗಳಾದ ಪಪ್ಪಾಯ, ಸಪೋಟ, ಸೀಬೆ, ದ್ರಾಕ್ಷಿ, ನೆಲ್ಲಿಕಾಯಿ, ಮಾವಿನ ಹಣ್ಣು, ದಾಳಿಂಬೆ, ಸ್ಟಾರ್‌ಫ್ರೂಟ್, ಸ್ಟಾçಬೆರಿ, ಬಾಳೆಹಣ್ಣು, ದಾಳಿಂಬೆ, ಅಂಜೂರ.
ತರಕಾರಿಗಳು: ಬೆಂಡೇಕಾಯಿ, ಫ್ರೆಂಚ್ ಬೀನ್ಸ್, ಬದನೆಕಾಯಿ, ಚಪ್ಪರದ ಅವರೆ, ಟೊಮೆಟೊ, ಹಸಿ ಮೆಣಸಿನಕಾಯಿ, ಈರುಳ್ಳಿ, ಮೂಲಂಗಿ, ಕ್ಯಾರೆಟ್, ಬೀಟ್ರೂಟ್, ಕುಂಬಳಕಾಯಿ, ಹಾಗಲಕಾಯಿ, ಸೋರೆಕಾಯಿ, ಹೀರೇಕಾಯಿ, ಹೂಕೋಸು, ಸೇರಿದಂತೆ ಪುದೀನಾ, ಕೊತ್ತಂಬರಿ, ಕರಿಬೇವು, ಪಾಲಕ್ ಮತ್ತಿತರ ಸೊಪ್ಪುಗಳನ್ನು ಬೆಳೆಯಬಹುದು.

ಹೂವುಗಳು: ಚೆಂಡು ಹೂ, ಗುಲಾಬಿ, ಮಲ್ಲಿಗೆ, ಕನಕಾಂಬರ, ದಾಸವಾಳ, ಸೇವಂತಿಗೆ, ಜರ್ಬೆರಾ, ಗ್ಲಾಡಿಯೋಲಸ್, ಆಂಥೋರಿಯA, ವಿವಿಧ ಬಗೆಯ ಆರ್ಕಿಡ್ ಮೊದಲಾದ ಎಲ್ಲಾ ರೀತಿಯ ಬೆಳೆಗಳನ್ನೂ ತಾರಸಿ ಕೈತೋಟದಲ್ಲಿ ಬೆಳೆಯಬಹುದು.
ಜೌಷಧೀಯ ಬೆಳೆಗಳು: ಪುದೀನ, ರೋಸ್ಮೆರಿ, ಒಂದೆಲಗ (ಬ್ರಾಹ್ಮಿ), ಚಕ್ರಮುನಿ, ಹಿಪ್ಪಲಿ, ಅಮೃತ ಬಳ್ಳಿ, ದೊಡ್ಡ ಪತ್ರೆ, ನೆಲಬೇವು, ಮದುನಾಶಿನಿ, ಸ್ವೀವಿಯಾ. ನಿಂಬೆ, ಅಜ್ವಾನಾ ಮುಂತಾದ ಔಷಧೀಯ ಸಸ್ಯಗಳನ್ನು ಬೆಳೆಯಬಹುದು.

ನೀರಿನ ಸಧ್ಬಳಕೆ:
ನೀರು ಅನಾವಶ್ಯಕವಾಗಿ ಪೋಲಾಗುವುದನ್ನು ತಡೆದು ಸದ್ಬಳಕೆ ಮಾಡುವುದು ಎಲ್ಲರ ಮುಖ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಅಡುಗೆ ಮನೆಯಲ್ಲಿ ಬಳಕೆಯಾದ ನೀರನ್ನು ಸಮರ್ಪಕವಾಗಿ ಸೋಸುವ ವಿಧಾನದಿಂದ ಮತ್ತು ಮನೆಯಲ್ಲಿ ಸಾವಯವ ಮಾದರಿಯ ಸೋಪ್ಗಳ ಬಳಕೆಯ ಮೂಲಕ ಬಚ್ಚಲಿನ ನೀರನ್ನೂ ಸಂಗ್ರಹಿಸಿ ಮರು ಬಳಕೆ ಮಾಡಬಹುದು. ಮಳೆಯ ನೀರನ್ನು ಕೊಯ್ಲು ಮಾಡಿ (ಸಂಗ್ರಹಿಸಿ) ಟ್ಯಾಂಕ್‌ನಲ್ಲಿ ಸಂಗ್ರಹಿಸಿ ತರಕಾರಿ ಮತ್ತು ಹಣ್ಣುಗಳನ್ನು ಬೆಳೆಸಲು ಹನಿ ನೀರಾವರಿ ವ್ಯವಸ್ಥೆಯನ್ನು ತಾರಸಿಯಲ್ಲಿ ಅಳವಡಿಸಿಕೊಳ್ಳಬೇಕು.

ಸಾವಯವ ಪದ್ಧತಿಯ ನಿರ್ವಹಣಾ ಕ್ರಮ:
ಸಸ್ಯಗಳಿಗೆ ರಾಸಾಯನಿಕಗಳನ್ನು ಬಳಸುವ ಬದಲು ಸಾವಯವ ಗೊಬ್ಬರ ಮತ್ತು ಕೀಟ ರೋಗ ನಿರ್ವಹಣೆಗಾಗಿ ಬೆಳ್ಳುಳ್ಳಿ, ಈರುಳ್ಳಿ, ಬೇವಿನ ಕಷಾಯವನ್ನು ಸಿಂಪಡಿಸಬಹುದು. ಗಿಡಗಳಿಗೆ ಪೋಷಕಾಂಶ ಒದಗಿಸಲು ದ್ರವರೂಪದ ಸಗಣಿ ಗೊಬ್ಬರವನ್ನು ನೀಡಬಹುದು. ನಗರವಾಸಿಗಳು ತಮ್ಮ ಅಲ್ಪ ಬಿಸುವಿನ ವೇಳೆಯನ್ನೂ ಸಮರ್ಪಕವಾಗಿ ಬಳಸಿಕೊಂಡರೆ, ಸೋಮಾರಿ ಕಟ್ಟೆಯಲ್ಲಿ ಹರಟೆ ಹೊಡೆಯುತ್ತಾ ಸಮಯವನ್ನು ವ್ಯರ್ಥ ಮಾಡುವ ಬದಲು ಉತ್ಸಾಹದಿಂದ ತಾರಸಿ ಕೃಷಿಯಲ್ಲಿ ತೊಡಗಿಕೊಂಡರೆ ಮನೆಯ ಮೇಲೆಯೇ ಹಸಿರಿನ ಹೊಸ ಪ್ರಪಂಚವನ್ನು ತೆರೆಯಬಹುದು.

ಜೈವಿಕ ತ್ಯಾಜ್ಯ ನಿರ್ವಹಣೆ ಈಗ ಅತ್ಯಂತ ಸುಲಭ:
ತಾರಸಿ ತೋಟವನ್ನು ಮಾಡಿದಾಗ ಅಲ್ಲಿನ ಗಿಡಗಳಿಗೆ ಗಿಡಮರ ಮತ್ತು ಸಸಿಗಳ ತ್ಯಾಜ್ಯ, ಅಡುಗೆ ಮನೆಯ ತ್ಯಾಜ್ಯಗಳನ್ನು ಬಳಸಿಕೊಂಡು ಸಾವಯವ ಗೊಬ್ಬರ, ಜೀವಾಮೃತ, ಬಯೋಡೈಜಸ್ಟರ್ ರೂಪದಲ್ಲಿ ಪುನರ್ ಬಳಕೆ ಮಾಡಬಹುದು. ಹಾಗೂ ಈ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದಾಗ ಅವುಗಳಿಂದ ಆಗುವ ಮಾಲಿನ್ಯವನ್ನು ತಡೆದು, ತಾಜಾ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯಲು ಗೊಬ್ಬರವಾಗಿ ಬಳಸಬಹುದು. ಇದರಿಂದ ಕಸ ವಿಲೇವಾರಿಯೂ ಸುಲಭವಾಗುತ್ತದೆ. ಮನೆಯ ಹಸಿಕಸವನ್ನು ಸಂಗ್ರಹಿಸಿ ಮಹಡಿಯ ತೊಟ್ಟಿಯಲ್ಲಿ ಕೊಳೆಸಿದರೆ ಗೊಬ್ಬರವೂ ದೊರೆಯುತ್ತದೆ. ಸ್ವಲ್ಪ ಹೆಚ್ಚಿನ ಬಂಡವಾಳವನ್ನು ಹಾಕಿದರೆ ಗೊಬ್ಬರದ ಜೊತೆಗೆ ಗೋಬರ್ ಅನಿಲವನ್ನೂ ಪಡೆಯಬಹುದು.

ಮನೆಗಳನ್ನು ನಿರ್ಮಾಣ ಮಾಡುವಾಗ ತಾರಸಿ ಕೈತೋಟಕ್ಕೊಂದು ಅವಕಾಶ ಕಲ್ಪಿಸಿ:
ಹೊಸ ಮನೆಯ ನೀಲನಕ್ಷೆ ಸಿದ್ಧಪಡಿಸುವಾಗ ಎಂಜಿನಿಯರ್ಗೆ ತಾರಸಿ ತೋಟ ರೂಪಿಸಲು ಅಗತ್ಯವಿರುವಂತೆ ತಾರಸಿಯ ವಿನ್ಯಾಸ ಮಾಡಲು ಹೇಳಿರಿ. ಇದರಿಂದ ಸರಿಯಾದ ಸ್ಥಳದಲ್ಲಿ ಸರಿಯಾದ ಗಿಡಗಳನ್ನು ಬೆಳೆಸಲು ಸಾಧ್ಯವಾಗುತ್ತದೆ. ಮನೆ ಕಟ್ಟಿಸುವಾಗ ಮನೆಯ ಮಧ್ಯ ಭಾಗದಲ್ಲಿ ಗೋಪುರ ಮಾದರಿಯಲ್ಲಿ ವಿನ್ಯಾಸ ರೂಪಿಸಿದರೆ, ತಾರಸಿ ತೋಟಕ್ಕೆ ಅನುಕೂಲ ಮಾತ್ರವಲ್ಲದೇ, ಮನೆಯ ಒಳಗೆ ಯಥೇಚ್ಛವಾಗಿ ಗಾಳಿ ಮತ್ತು ಬೆಳಕು ಬರಲೂ ಅವಕಾಶ ಕಲ್ಪಿಸುತ್ತದೆ. ತಾರಸಿಯ ಇಕ್ಕೆಲಗಳಲ್ಲಿ ಅಗಲವಾದ ಬಾಕ್ಸ್ಗಳನ್ನು ಮೊದಲೇ ನಿರ್ಮಿಸಿಕೊಂಡರೆ ಅದರಲ್ಲಿ ಗಿಡಗಳನ್ನು ಬೆಳೆಸಲು ಸಾಧ್ಯವಾಗುತ್ತದೆ. ಗಿಡಕ್ಕೆ ಹಾಕುವ ನೀರು ಸರಾಗವಾಗಿ ಹರಿದು ಹೋಗಲು ಅಲ್ಲಲ್ಲಿ ಸಣ್ಣ ಸಣ್ಣ ಪೈಪುಗಳನ್ನು ಅಳವಡಿಸಿದರೆ ತಾರಸಿಯಲ್ಲಿ ಅಲ್ಲಲ್ಲಿ ನೀರು ನಿಲ್ಲುವುದಿಲ್ಲ.

ಸಾವಯವ ಪದ್ಧತಿಯಲ್ಲಿ ಕೀಟ ಮತ್ತು ರೋಗ ನಿರ್ವಹಣೆ:

• ತಾರಸಿ ತೋಟದ ಕುಂಡಗಳು ಯಾವಾಗಲೂ ಸ್ವಚ್ಚವಾಗಿ ಮತ್ತು ಕಳೆಗಳಿಂದ ಮುಕ್ತವಾಗಿರಬೇಕು.
• ತರಕಾರಿಗಳನ್ನು ಬೆಳೆಯುವಾಗ ಕುಂಡಗಳಲ್ಲಿ ಬೆಳೆ ಪರಿವರ್ತನೆ ಪದ್ಧತಿಯನ್ನು (ಒಂದು ಕುಂಡದಲ್ಲಿ ಒಂದು ರೀತಿಯ ಬೆಳೆಯನ್ನು ಬೆಳೆದಿದ್ದರೆ, ನಂತರದಲ್ಲಿ ಬೇರೆ ಬೆಳೆಯನ್ನು ಬೆಳೆಯುವುದು) ಅನುಸರಿಸಬೇಕು.
• ಚೆನ್ನಾಗಿ ಕಳಿತ (ಕೊಳೆತ) ಕಾಂಪೋಸ್ಟ್ ಮತ್ತು ಎರೆಗೊಬ್ಬರಗಳನ್ನು ಉಪಯೋಗಿಸಬೇಕು.
• ತಾರಸಿ ತೋಟದಲ್ಲಿರುವ ಗಿಡಗಳಿಗೆ ನೀರುಣಿಸಿದಾಗ ನೀರು ವ್ಯವಸ್ಥಿವಾಗಿ ಬಸಿದು ಹೋಗುವಂತೆ ಇರಬೇಕು.
• ಬೆಳೆಗಳನ್ನು ತುಂಬಾ ಒತ್ತಾಗಿ ಬಿತ್ತನೆ ಯಾ ನಾಟಿ ಮಾಡದೆ ಬೆಳೆಗೆ ತಕ್ಕಂತೆ ಅಂತರವನ್ನು ಕಾಯ್ದುಕೊಳ್ಳಬೇಕು.
• ತಾರಸಿ ತೋಟಕ್ಕೆ ಬಳಸುವ ಮಣ್ಣನ್ನು ಬಿಸಿಲಿಗೆ ಹರಡಿ ಚೆನ್ನಾಗಿ ಒಣಗಿದ ನಂತರ ಉಪಯೋಗಿಸಬೇಕು.

• ನಾಟಿ ಮಾಡಿದ ೨೦ ದಿನಗಳ ನಂತರ ಗಿಡಗಳಿಗೆ ೪% ಬೇವಿನ ಬೀಜದ ರಸ ಅಥವಾ ಹೊಂಗೆ ಯಾ ಬೇವಿನ ಸೋಪ್ (೧ಲೀ. ನೀರಿಗೆ ೧೦ಗ್ರಾಂ) ಸಿಂಪಡಿಸಿದರೆ ಹೇನು ಹಾಗೂ ಇತರ ಪೀಡೆಗಳನ್ನು ನಿಯಂತ್ರಿಸಬಹುದು.
• ಎಕ್ಕದ ಎಲೆಗಳನ್ನು ೨೪ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು, ಬಳಿಕ ಸೋಸಿ ತೆಗೆದ ನೀರಿನ ಸಾರದಿಂದ ಗೆದ್ದಲು ಹುಳಗಳನ್ನು ನಿಯಂತ್ರಿಸಬಹುದು.

• ೧೦೦ ಗ್ರಾಂ ಕೊತ್ತಂಬರಿ ಬೀಜವನ್ನು ಪುಡಿ ಮಾಡಿ ಅರ್ಧ ಲೀಟರ್ ನೀರಿನಲ್ಲಿ ೧೦ ನಿಮಿಷಗಳ ಕಾಲ ಕಾಯಿಸಿ ಶೋಧಿಸಿದ ದ್ರಾವಣಕ್ಕೆ ೧ಲೀ ನೀರನ್ನು ಬೆರಸಿ ಸಿಂಪಡಿಸುವ ಮೂಲಕ ಗಿಡಗಳ ನುಸಿ ಮತ್ತು ಹೇನಿನ ಬಾಧೆಯನ್ನು ತಡೆಗಟ್ಟಬಹುದು.
ಹೆಚ್ಚುತ್ತಿರುವ ನಗರೀಕರಣದ ಕಾರಣದಿಂದ ಹಸಿರಿನ ಪರ್ಯಾವರಣ ಪ್ರತಿ ದಿನ ಪ್ರತಿ ಕ್ಷಣ ಕಡಿಮೆಯಾಗುತ್ತಿದೆ. ಪ್ರತಿ ಮನೆಯಲ್ಲೂ ಗಿಡಮರಗಳನ್ನು ಪ್ರತಿಷ್ಠಾಪಿಸಿ, ಆಮ್ಲಜನಕದ ತಾಣಗಳನ್ನಾಗಿ ಮಾಡುವುದು ಇಂದಿನ ಅನಿವಾರ್ಯ ಕೆಲಸಗಳಲ್ಲಿ ಒಂದಾಗಿದೆ.

\

ಪಟ್ಟಣಗಳಲ್ಲಿ ಸ್ಥಳಾವಕಾಶ ಇಲ್ಲ ಎಂದು ಹೇಳುವ ಮೂಲಕ ಬೆಣ್ಣೆಯಲ್ಲಿ ಕಲ್ಲನ್ನು ಹುಡುಕುವ ಮನಃಸ್ಥಿತಿಯ ಜನರಿಗೆ ತಾರಸಿ ಕೃಷಿ ಅಥವಾ ಕೈತೋಟ ಒಂದು ಅದ್ಭುತ ಆಯ್ಕೆ ಎಂದರೆ ತಪ್ಪಾಗದು. ಆದ್ದರಿಂದ ಜಮೀನಿರುವವರು ತಮ್ಮ ಲಭ್ಯ ಜಮೀನಿನಲ್ಲಿ ಮತ್ತು ಜಮೀನು ಇಲ್ಲದೇ ಇರುವವರು ತಮ್ಮ ಮನೆಯ ತಾರಸಿಯಲ್ಲಿ ಕನಿಷ್ಟ ತರಕಾರಿ, ಹೂವು ಮತ್ತು ಇತರ ಸೊಪ್ಪನ್ನು ಬೆಳೆಯುವ ಕೆಲಸವನ್ನು ಮಾಡಬೇಕು. ಈ ಮೂಲಕ ಪ್ರತಿ ನಾಗರಿಕನೂ ತನ್ನ ಮನೆಗೆ ಅಗತ್ಯವಿರುವ ಹೂ ಹಣ್ಣು ತರಕಾರಿಗಳನ್ನು ಮನೆಯ ತಾರಸಿಯ ಮೇಲೆ ಬೆಳಸಿ ಮನೆಯ ಸದಸ್ಯರ ಆರೋಗ್ಯವನ್ನು ಕಾಪಾಡಲು ಸಾಧ್ಯವಾಗುವುದು. ಅಷ್ಟೇ ಅಲ್ಲದೇ ಮನೆಯ ಖರ್ಚನ್ನೂ ನಿಯಂತ್ರಿಸಿ, ಹೆಚ್ಚಿನ ಬೆಳೆಯನ್ನು ಬೆಳೆದಲ್ಲಿ ಅದನ್ನು ಮಾರಾಟ ಮಾಡಿ ಆದಾಯವನ್ನೂ ಗಳಿಸಬಹುದು, ಈ ಮೂಲಕ ಸ್ವಸ್ಥ ಪರಿಸರ ಮತ್ತು ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಬಹುದು.

ಬರಹ
ಸಂತೋಷ್ ರಾವ್ ಪೆರ್ಮುಡ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ
ದೂ: ೯೭೪೨೮೮೪೧೬೦

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group