ಕೋವಿಡ್ ಎಬ್ಬಿಸಿದ ಬಿರುಗಾಳಿಯಿಂದ ವಿವಿಧ ಕ್ಷೇತ್ರಗಳಲ್ಲಿ ತಲ್ಲಣವಾಯಿತು. ಈ ನೆಪದಲ್ಲಿಯೇ ಉದ್ಯೋಗ -ಉದ್ಯಮದಲ್ಲಿ ಏರುಪೇರುಗಳಾದವು. ಹಲವು ಉದ್ಯಮಗಳು ನೆಲಕಚ್ಚಿದವು. ಸಹಸ್ರಾರು ಮಂದಿಯ ಅನ್ನದ ಬಟ್ಟಲು ಬರಿದಾಯಿತು. ಈ ಪಲ್ಲಟದ ಅವಧಿಯಲ್ಲಿ ಹೊಸತನಕ್ಕಾಗಿ ಸ್ವಾವಲಂಬನೆಗಾಗಿ ಹೋರಾಟ ಮಾಡಿದವರು ಹಲವರು. ಶ್ರಮ, ಶ್ರದ್ದೆಯೊಂದಿಗೆ ಬದುಕು ಕಟ್ಟಿಕೊಳ್ಳಲು ಮುಂದಾದವರು ಮತ್ತೆ ಕೆಲವರು. ಈ ಹೋರಾಟದ ಹಾದಿಯಲ್ಲಿ ಮುಗ್ಗರಿಸಿದವರಿದ್ದಾರೆ. ಯಶಸ್ಸಿನ ಹಾದಿ ತುಳಿದವರಿದ್ದಾರೆ. ನೂರಾರು ಕನಸುಗಳನ್ನು ಹೊತ್ತು ಪತ್ರಿಕಾ ರಂಗದಲ್ಲಿ ದುಡಿಯುತ್ತಾ ಬಂದವರು ಇದಕ್ಕೆ ಹೊರತಾಗಿರಲಿಲ್ಲ. ಕೋವಿಡಿನ ಅಲೆಯಿಂದ ತನ್ನ ಉದ್ಯೋಗದ ಬುಡವನ್ನೇ ಅಲ್ಲಾಡಿಸಿದರೂ ಎದೆಗುಂದದೆ ಸ್ವ ಉದ್ಯೋಗದ ಮೂಲಕ ಯಶಸ್ಸನ್ನು ಕಂಡ ಯುವ ಪತ್ರಕರ್ತರೊಬ್ಬರ ಯಶೋಗಾಥೆ ಇಲ್ಲಿದೆ.
ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಸರ್ವೆ ಗ್ರಾಮ ಪುತ್ತೂರಿಗೆ ಹತ್ತಿರವಿದ್ದರೂ ಕೃಷಿಕರೇ ಪ್ರಧಾನವಾಗಿರುವ ಹಳ್ಳಿ. ಸರ್ವೆಯ ಭರತರಾಜ್ ಸೊರಕೆ ಪತ್ರಿಕೋದ್ಯಮ ಪದವಿ ಪಡೆದ ನಂತರ ಹೊಸ ಕನಸುಗಳನ್ನು ಹೊತ್ತುಕೊಂಡು ಪತ್ರಿಕಾ ರಂಗಕ್ಕೆ ಕಾಲಿಟ್ಟರು. ಹೊಸದಿಗಂತ, ಉದಯವಾಣಿ, ವಿಜಯವಾಣಿ ಸೇರಿದಂತೆ ಸುಮಾರು 12 ವರ್ಷಗಳ ಕಾಲ ದುಡಿದ ಅವರು ಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವತ್ತಿದ್ದರು. ಪತ್ರಿಕಾ ಯಾನ ಮುದ ನೀಡಿ ಮುನ್ನಡೆಯುತ್ತಿರುವಾಗಲೇ ಕೊರೊನಾದ ಕರಾಳ ಮುಖ ಎದುರಾಯಿತು. ಮುಂದೇನು ಎಂಬ ಪ್ರಶ್ನೆ ಭರತ್ ರಾಜ್ ಸೊರಕೆಯವರನ್ನು ಕಾಡಿತ್ತು. ಪ್ರತ್ರಿಕೋದ್ಯಮ ಬಿಡದೆ ಗತ್ಯಂತರವಿಲ್ಲ. ಬಿಡದಿದ್ದರೆ ಬದುಕಿನ ನೇರ ದಾರಿ ಹುಡುಕಿವಂತಿಲ್ಲ. ಕೃಷಿಯಿದೆ ಆದರೂ ಅದರತ್ತ ಮನಮಾಡಿರಲಿಲ್ಲ. ಆಗ ಅವರಿಗೆ ಕಂಡದ್ದು ಮಕರಂದವನ್ನು ಹೀರಿ ಸವಿ ಜೇನು ನೀಡುವ ಜೇನು ಕೃಷಿ.
ಜೇನು ಕೃಷಿ ಪ್ರೇರಣೆಯಾಯ್ತು:
ಅದೇ ಹೊತ್ತಿಗೆ ಸಮೀಪದ ಕಡಬ ತಾಲೂಕಿನಲ್ಲಿ ನಡೆದ ಜೇನು ಕೃಷಿ ತರಬೇತಿ ಶಿಬಿರಕ್ಕೆ ಹೋಗಿದ್ದರು. ಜೇನು ಕೃಷಿಯತ್ತ ಆಸಕ್ತಿ ಹುಟ್ಟಿಕೊಂಡಿತು. 2020ರಲ್ಲಿ ಸರಕಾರದ ಸಹಾಯಧನದ ಎರಡು ಜೇನು ಪೆಟ್ಟಿಗೆ ಪಡೆದುಕೊಂಡು ತನ್ನದೇ ಸ್ವಾವಲಂಬನೆಯ ಉದ್ಯೋಗದ ಹೊಸ ಕನಸುಗಳನ್ನು ಅನಾವರಣಗೊಳಿಸಿದರು. ಈ ನಡುವೆ ಜೇನು ಕೃಷಿಕರಾದ ಮನಮೋಹನ್ ಅವರಲ್ಲಿ ಹೆಚ್ಚಿನ ಮಾಹಿತಿ ಮಾರ್ಗದರ್ಶನ ಪಡೆದುಕೊಂಡರಲ್ಲದೆ ಇತರರ ಅನುಕೂಲಕ್ಕಾಗಿ ಜಾಲತಾಣಗಳಲ್ಲಿಯೂ ಮಾಹಿತಿಗಳನ್ನು ಹಂಚಿಕೊಂಡರು. ಸಾಮಾಜಿಕ ಜಾಲ ತಾಣ ಯೂಟ್ಯೂಬ್‌ನಲ್ಲಿ ಹರಿಬಿಟ್ಟ ಜೇನು ಕೃಷಿ ಮಾಹಿತಿಗಳು ಇತರರಿಗೂ ಪ್ರೇರಣೆಯಾದವು.
ಆರಂಭದಲ್ಲಿ ಕೆಲವೊಂದು ಎಡರು-ತೊಡರುಗಳು ಸಾಮಾನ್ಯವಾಗಿ ಕಾಡಿದರೂ ಒಂದೇ ವರ್ಷದಲ್ಲಿ ಎರಡು ಪೆಟ್ಟಿಗೆಗಳು 2೦ಕ್ಕೆ ಏರಿತು. ಈಗ 22-23ನೇ ಸಾಲಿಗೆ ಪೆಟ್ಟಿಗೆಗಳ ಸಂಖ್ಯೆ ನೂರಕ್ಕೆ ತಲುಪಿದೆ. ಜೇನು ಸಾಕಣೆಯಲ್ಲಿ ಸೂಕ್ಷ್ಮವಾದ ಗುಣ ಧರ್ಮಗಳನ್ನು ಅರಿತು ಅದರಲ್ಲೇ ತನ್ಮಯತೆಯನ್ನು ಕಂಡುಕೊಂಡ ಭರತ್‌ರಾಜ್ ಈಗ ಮಾದರಿ ಜೇನು ಕೃಷಿಕ. “ಬೀ ಭರತ “ಎಂದೇ ಪರಿಚಿತರು. ಪತ್ರಿಕೋದ್ಯಮದಿಂದ ಜೇನು ಕೃಷಿಯತ್ತ ಇವರ ಸವಿ ಸವಿ ಯಾನ. ಸ್ವ ಉದ್ಯೋಗ ಮತ್ತು ಸ್ವಾವಲಂಬನೆಯ ಹೊಸ ದಾರಿ ತಾನು ನಿಂತ ನೆಲದಲ್ಲಿಯೇ ಕಂಡುಕೊಂಡವರು
ಇವರು ವರ್ಷವೊಂದಕ್ಕೆ ಒಂದು ಜೇನು ಪೆಟ್ಟಿಗೆಯಿಂದ ಸರಾಸರಿ 8-1೦ಕೆಜಿ ಜೇನು ಪಡೆಯುತ್ತಾರೆ. ಸ್ಥಳಾಂತರ ಜೇನು ಕೃಷಿಗೆ ಅನುಕೂಲವಾಗಿರುವುದರಿಂದ ಕೇರಳ ಮಾದರಿ ಜೇನುಪೆಟ್ಟಿಗೆಯನ್ನು ಅವರು ಹೆಚ್ಚು ಬಳಸುತ್ತಾರೆ. ಜೇನು ಸಾಕಾಣೆಯಿಂದಲೇ ಏನಾದರೂ ಹೊಸತನ ಕಂಡುಕೊಳ್ಳಬೇಕೆಂಬ ಹಂಬಲ ಅವರದು
ತೊಡುವೆ ಜೇನು ಕೃಷಿ
ಜೇನು ಕೃಷಿಯಲ್ಲಿ ಅಧಿಕ ಇಳುವರಿ ಕೊಡುವ ತಳಿಗಳಿದ್ದರೂ ಸೊರಕೆ ಅವರು ಆಯ್ದುಕೊಂಡದ್ದು ತೊಡುವೆ ಜೇನು. ಮಲೆನಾಡು, ಕಾಡು ಪರಿಸರದಲ್ಲಿ ಹೊಂದಿ ಬದುಕುವ ತಳಿಯಿದು. ಔಷಧೀಯ ಗುಣವೂ ಹೆಚ್ಚು.
ಮಾರಾಟ ವ್ಯವಸ್ಥೆ
ಜೇನು ಸಾಕಾಣೆ ಮಾಡಬಹುದು. ಜೇನು ಸಂಗ್ರಹಿಸಬಹುದು. ಆದರೆ ಬಹಳಷ್ಟು ಕಡೆಗಳಲ್ಲಿ ಮಾರುಕಟ್ಟೆಯ ವ್ಯವಸ್ಥೆಯಿಲ್ಲದೆ ಉತ್ಪಾದಕರು ಸೋಲುತ್ತಾರೆ. ಭರತ್‌ರಾಜ್ ಅವರಿಗೆ ಇಂಥ ಸಮಸ್ಯೆಗಳು ಎದುರಾಗಲಿಲ್ಲ. ಸಾಮಾಜಿಕ ಜಾಲತಾಣಗಳೇ ಇವರ ಜೇನು ಉತ್ಪನ್ನಗಳ ಮಾರಾಟಕ್ಕೆ ಪ್ರಮುಖ ಕೊಂಡಿಗಳು. ಕೃಷಿ ಮೇಳ, ಜೇನು ಹಬ್ಬ, ಮೊಲಾದ ಕಡೆ ಮಳಿಗೆಗಳಲ್ಲಿ ಮಾರಾಟ ಮಾಡುತ್ತಾರೆ. ಜೇನು ಔಷಧಿಗೆ ಮಾತ್ರವಲ್ಲ ಆಹಾರದಲ್ಲಿಯೂ ಬಳಕೆಯಾಗುವುದರಿಂದ ಬಹಳಷ್ಟು ಬೇಡಿಕೆಯಿದೆ. ಸ್ಥಳೀಯವಾಗಿಯೇ ಖರೀದಿಸುವವರಿದ್ದಾರೆ. ಜೇನು ಕೃಷಿಕರ ಸಹಕಾರಿ ಸಂಘವೂ ಖರೀದಿಸುತ್ತದೆ. ಆದ್ದರಿಂದ ಜೇನು ಕೃಷಿಕರಿಗೆ ಮಾರಾಟದ ಸಮಸ್ಯೆ ಎದುರಾಗದು. ಎನ್ನುತ್ತಾರೆ ಭರತ್‌ರಾಜ್
ಏಕಾಏಕಿ ಬಂಡವಾಳ ಬೇಡ
ಜೇನು ಸಾಕಾಣಿಕೆ ಆರಂಭಿಸುವವರು ಏಕಾಏಕಿ ಬಹಳಷ್ಟು ಬಂಡವಾಳ ಹೂಡಲು ಮುಂದಾಗಬಾರದು. ತರಬೇತಿ ಪಡೆದುಕೊಂಡ ನಂತರ ಒಂದೆರಡು ಪೆಟ್ಟಿಗೆಯಿಂದಲೇ ಜೇನು ಕೃಷಿ ಆರಂಭಿಸಿದರೆ ಉತ್ತಮ. ಇಲ್ಲಿ ದೊರೆಯುವ ಅನುಭವಗಳ ಹಿನ್ನಲೆಯಲ್ಲಿ ಜೇನು ಪೆಟ್ಟಿಗೆ ಹೆಚ್ಚು ಮಾಡುತ್ತಾ ಹೋಗಬಹುದು. ಜೇನು ಸಿಹಿಯೆಂದು ಖುಷಿಯಿಂದ ಕೃಷಿಗಿಳಿದು ದೊಡ್ಡ ಬಂಡವಾಳ ಹಾಕಿದರೆ ಅದು ಕಹಿಯಾಗಲೂಬಹುದು. ಸಿಹಿಕಹಿಗಳು ಎಲ್ಲಾ ಕ್ಷೇತ್ರಗಳಲ್ಲಿ ಇದ್ದೇ ಇರುತ್ತದೆ. ಜಾಗರೂಕತೆಯಿಂದ ಅಡಿಯಿಡಬೇಕು. ಬದ್ಧತೆಯಿಂದಲೇ ಕಾರ್ಯನಿರ್ವಹಿಬೇಕು. ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಂಡವರು ಜೇನು ವ್ಯವಸಾಯವನ್ನು ಮಾಡಬಹುದು. ಜೇನು ಕೃಷಿಯನ್ನೇ ಪ್ರಧಾನವಾಗಿ ಮಾಡಿ ಯಶಸ್ಸನ್ನು ಗಳಿಸಬಹುದು. ಜೇನು ಸಾಕಾಣೆಯಲ್ಲದೆ ಜೇನು ಕೃಷಿ ಆಸಕ್ತಿಯುಳ್ಳವರಿಗೆ ಜೇನು ಕುಟುಂಬ ಮತ್ತು ಪೆಟ್ಟಿಗೆ ಮಾರಾಟ ಮಾಡುತ್ತಾರೆ. ಹೊಸಬರಿಗೆ ಮಾಹಿತಿ ಮಾರ್ಗದರ್ಶನ ನೀಡುತ್ತಾರೆ.
ಸವಿ ಉಡುಗೊರೆ ಜೇನು ಮತ್ತಷ್ಟು ಸವಿ ಸವಿ ನೆನಪುಗಳಾಗಿಸಲು ಭರತ್‌ರಾಜ್ ಸೊರಕೆ ಅವರು ನೂತನ ದಾರಿಯನ್ನು ಕೊಂಡುಕೊಂಡಿದ್ದಾರೆ. ಸಭೆ, ಸಮಾರಂಭಗಳಿಗೆ ಹೋದಾಗ ಹೂ ಅಥವಾ ಹೂಗುಚ್ಛ ನೀಡಿ ಗೌರವಿಸುವುದು ಸಾಮಾನ್ಯ ಸಂಪ್ರದಾಯ. ಈ ಹೂಗಳು ಕೆಲವೇ ಗಂಟೆಗಳಲ್ಲಿ ಬಾಡಿ ತ್ಯಾಜ್ಯಗಳಾಗುತ್ತವೆ. ಕಸದ ರಾಶಿ ಸೇರುತ್ತವೆ. ಆದರೆ ಜೇನಿನ ಕೊಡುಗೆ ನೀಡಿದರೆ ಮನೆಯವರೆಗೆ ತಲುಪುತ್ತದೆ. ಮನೆ ಮಂದಿಗೆಲ್ಲಾ ಸಿಹಿ ಹಂಚಿಕೆಯಾಗುತ್ತದೆ. ಎಂಬ ಹೊಸ ಪರಿಕಲ್ಪನೆಯೊಂದಿಗೆ ಜೇನು ಬುಟ್ಟಿ, ಸವಿ ಉಡುಗೊರೆ, ಸವಿ ಸ್ಮರಣಿಕೆಯೆಂಬ ಕೊಡುಗೆಗಳನ್ನು ಪರಿಚಯಿಸಿದ್ದಾರೆ.
ಪ್ರಶಸ್ತಿ, ಸನ್ಮಾನ, ಅಭಿನಂದನೆ ಕಾರ್ಯಕ್ರಮಗಳಿಗೆ ಪೂರಕವಾಗಿ ಸಿಹಿ ಸ್ಮರಣಿಕೆ, ಸಮಾರಂಭಗಳಿಗೆ ಸಿಹಿತಿಂಡಿ ಪ್ಯಾಕೆಟ್ ಪರ್ಯಾಯವಾಗಿ ಸವಿ ಉಡುಗೊರೆ ಹಾಗೂ ಜೇನು ಬುಟ್ಟಿ ಇದೀಗ ಬಹಳಷ್ಟು ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ. ತಮ್ಮ ಊರಿನ ಹಾಗೂ ಸುತ್ತಲಿನ ಊರಿನ ಸಭೆ ಸಮಾರಂಭಗಳಲ್ಲಿ ಭಾಗವಹಿಸಿದ ಅತಿಥಿಗಳಿಗೆ ಸ್ಮರಣಿಕೆಯಾಗಿ ಜೇನನ್ನು ನೀಡಲಾಗುತ್ತದೆ.
ಜೇನುಪಾಕದ ನೆಲ್ಲಿಕಾಯಿ ಕ್ಯಾಂಡಿ
ನೆಲ್ಲಿಕಾಯಿ ಔಷಧೀಯ ಗುಣವುಳ್ಳದ್ದು. ಕಾಡು-ಗುಡ್ಡಗಳಲ್ಲಿ ಬೆಳೆದು ಪ್ರಾಣಿ ಪಕ್ಷಿಗಳ ಪಾಲಿಗೆ ಆಹಾರವಾಗುತ್ತಿದ್ದ ನೆಲ್ಲಿಕಾಯಿ ಈಗ ಕೃಷಿ ಮಾಡಿ ಮಾರಾಟ ಮಾಡುವಷ್ಟು ಬೆಳೆದಿದೆ. ಒಣ ನೆಲ್ಲಕಾಯಿಯನ್ನು ಸಕ್ಕರೆ ಪಾಕದಲ್ಲಿ ಅದ್ದಿ ಮಾಡಿದ ಆಮ್ಲ ಕ್ಯಾಂಡಿ ಬಹಳ ಪ್ರಸಿದ್ಧಿ. ಭರತ್‌ರಾಜ್ ಅವರು ನೆಲ್ಲಿಕಾಯಿಯನ್ನು ಜೇನುತುಪ್ಪದಲ್ಲಿ ಹಾಕಿ ಜೇನಿನ ಆಮ್ಲ ಕ್ಯಾಂಡಿಯನ್ನು ಹೊಸದಾಗಿ ಪರಿಚಯಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಜೇನು ಲೇಪಿತ ಒಣಹಣ್ಣುಗಳನ್ನು ಪರಿಚಯಿಸುವ ಚಿಂತನೆ ನಡೆಸಿದ್ದಾರೆ
ಜೇನು ಖರೀದಿಸುವಾಗ ಸಹಜವಾದ ಜೇನೇ ಅಥವಾ ಕಲಬೆರಕೆಯೇ ಎಂಬ ಅನುಮಾನ ಕೆಲ ಗ್ರಾಹಕರಲ್ಲಿ ಕಾಡುವುದಿದೆ. ಸಂಶಯ ನಿವಾರಿಸಲು ಸ್ಥಳದಲ್ಲೇ ಪೆಟ್ಟಿಗೆಯಿಂದ ಜೇನು ತೆಗೆದುಕೊಡುತ್ತಾರೆ. ಎಪ್ರಿಲ್, ಮೇ ನಂತರ ಎರಿ ಸಹಿತವಾಗಿ ಅವರು ಮಾರಾಟ ಮಾಡುತ್ತಾರೆ. ಸ್ಥಳಕ್ಕೆ ಬಂದು ಜೇನು ಖರೀದಿಸುವುದರಿಂದ ಜನರಲ್ಲಿ ವಿಶ್ವಾಸ ಹೆಚ್ಚುತ್ತದೆ. ಸಂತೃಪ್ತಿಯೂ ಇರುತ್ತದೆ.
ಜೇನು ಕಾಲ ಜನವರಿಯಿಂದ ಮಳೆಗಾಲ ಆರಂಭವಾಗುವವರೆಗೆ ಮಾತ್ರ. ಹೀಗಾಗಿ ಜನವರಿ, ಫೆಬ್ರವರಿ ತಿಂಗಳಲ್ಲಿ ರಬ್ಬರ್ ತೋಟದ ಜೇನು, ಮಾರ್ಚ್ನಿಂದ ಜೂನ್ ಮೊದಲ ವಾರದ ವರೆಗೆ ಕಾಡಿನ ಪರಿಸರಕ್ಕೆ ಸ್ಥಳಾಂತರ ಮಾಡಿ ಜೇನು ಸಂಗ್ರಹಿಸಲಾಗುತ್ತದೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ಸ್ಥಳೀಯ ಕೃಷಿ ತೋಟಗಳಿಗೆ ಪೆಟ್ಟಿಗೆ ಸ್ಥಳಾಂತರಿಸಿ ಜೇನು ಕುಟುಂಬ ಅಭಿವೃದ್ಧಿ ಮಾಡಲಾಗುತ್ತದೆ. ಇದರಿಂದ ಪರಾಗಸ್ಪರ್ಶ ಚುರುಕಾಗಿ ಬೆಳೆ ಹೆಚ್ಚಳಕ್ಕೆ ಅನುಕೂಲ ಎನ್ನುತ್ತಾರೆ ಭರತ್‌ರಾಜ್ ಮಾಹಿತಿಗೆ ಮೊ: 9449318553
ಬರಹ-ರಾಧಾಕೃಷ್ಣ ತೊಡಿಕಾನ: ಚಿತ್ರ : ರಾಮ್