spot_img
Wednesday, October 30, 2024
spot_imgspot_img
spot_img
spot_img

ಸಾವಯವ ಸುಸ್ಥಿರ ಕೃಷಿಕನ ಯಶಸ್ವಿ ಕತೆ ಇದು!

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹಸರಗುಂಡಗಿಯ ಎಂ.ಎಸ್.ಡಬ್ಲ್ಯೂ ಓದಿದ ಹನುಮಂತಪ್ಪ ಮಲ್ಲೇಶಪ್ಪ ಬೆಳಗುಂಪಿ(58) 15 ಎಕರೆ ಖುಷ್ಕಿ ಮತ್ತು 7 ಎಕರೆ ನೀರಾವರಿ ಭೂಮಿಯಲ್ಲಿ ಸಾವಯವ ಸುಸ್ಥಿರ ಕೃಷಿ ಪದ್ಧತಿಯಿಂದ ತೋಟಗಾರಿಕೆ ಮತ್ತು ಆಹಾರಧಾನ್ಯ ಬೆಳೆಗಳನ್ನು ಕಳೆದ 15 ವರ್ಷಗಳಿಂದ ಬೆಳೆದು ವರ್ಷಕ್ಕೆ 14 ಲಕ್ಷ ರೂ.ಗಿಂತ ಅಧಿಕ ಲಾಭ ಗಳಿಸುತ್ತಿದ್ದಾರೆ. ಜೇನುಕೃಷಿ, ಕುರಿ ಸಾಕಾಣಿಕೆ, ಎರೆಹುಳು ಗೊಬ್ಬರ, ಜೀವಾಮೃತ, ಜೈವಿಕ ಕೀಟನಾಶಕ, ಸಾವಯವ ತೊಗರಿಬೇಳೆ ತಯಾರಿಕೆ ಮತ್ತು ರೈತರಿಗಾಗಿ ಕೃಷಿ ಪಾಠಶಾಲೆ ನಡೆಸುತ್ತಿದ್ದು, ರೈತರಿಗೆ ಮಾದರಿಯಾಗಿದ್ದಾರೆ.

ಚೆನ್ನೈ ನಲ್ಲಿ ನೌಕರಿ ಮಾಡುವಾಗ ಕ್ಯಾನ್ಸರ್ ಆಸ್ಪತ್ರೆಯಲ್ಲಿಯೂ ಕೌನ್ಸಿಲರ್ ಆಗಿದ್ದರು. ದುಶ್ಚಟವಿಲ್ಲದವರೂ ಕ್ಯಾನ್ಸರ್ ಚಿಕಿತ್ಸೆಗೆ ಬರುವುದನ್ನು ಕಂಡು ಚಕಿತರಾಗಿ ಆಳಧ್ಯಯನ ನಡೆಸಿದರು. ಇದಕ್ಕೆ ವಿಷಾಹಾರ ಸೇವನೆಯೇ ಪ್ರಮುಖ ಕಾರಣವೆಂಬುದನ್ನರಿತು ವಿಷಮುಕ್ತ ಆಹಾರೋತ್ಪಾದನೆಯ ದೃಢಸಂಕಲ್ಪ ಮಾಡಿ ನೌಕರಿಯನ್ನೇ ತ್ಯಜಿಸಿದರು. ತಮ್ಮ ಭೂಮಿಯಲ್ಲಿ ಸಾವಯವ ಕೃಷಿಯ ಹತ್ತಾರು ಪ್ರಯೋಗಗಳನ್ನು ನಡೆಸಿ ಸಾವಯವ ಸಂತ ಎಂದೇ ಬಿಂಬಿತರಾಗಿದ್ದಾರೆ. ಪತ್ನಿ ಜಗದೇವಿ ಕೃಷಿಕಾರ್ಯ ಚಟುವಟಿಕೆಗಳಿಗೆ ಕೈಜೋಡಿಸುವರು.

ಹನುಮಂತಪ್ಪ 2.22 ಎಕರೆಯಲ್ಲಿ 1೦೦ ದಶಹರಿ, ಕೇಸರ, ಮಲ್ಲಿಕಾ ತಳಿಯ ಮಾವು, ಕ್ರಿಕೆಟ್ ಬಾಲ್ ಮತ್ತು ಕಾಲಾಪತಿ ತಳಿಯ 1೦೦ ಸಪೋಟ, ಲಕ್ನೋ-49, ಅಲಹಾಬಾದ ಸಫೇದ ಮತ್ತು ತೈವಾನ್ ತಳಿಯ 5೦೦ ಪೇರಲ, ಬಾಲನಗರ ತಳಿಯ 5೦ ಸೀತಾಫಲ, 1೦೦ ತೆಂಗು, ಬಾಲಾಜಿ ತಳಿಯ 1೦೦ ಲಿಂಬೆ ಗಿಡಗಳನ್ನು ಹಾಗೂ ಹೊಲದ ಬದುಗಳಲ್ಲಿ 2೦೦ ಸಾಗುವಾನಿ ಮರಗಳನ್ನು ಕಳೆದ 13 ವರ್ಷದಿಂದ ಬೆಳೆದಿದ್ದಾರೆ.

ತೋಟಗಾರಿಕೆ ಬೆಳೆಗಳಿಗಾಗಿ ಆಳದ ಗುಂಡಿಗಳನ್ನು ತೋಡಿ ಜೀವಾಮೃತ, ಪಂಚಗವ್ಯ, ಗೋಪಜಲ, ವೇಸ್ಟ್ ಡಿಕಂಪೋಜರ್, ಎರೆಹುಳು ಗೊಬ್ಬರಗಳಿಂದ ಭೂಮಿ ಫಲವತ್ತತೆ ಹೆಚ್ಚಿಸಿದರು. ಸಸಿಗಳನ್ನು ಗಿಡದಿಂದ ಗಿಡಕ್ಕೆ ಮತ್ತು ಸಾಲಿನಿಂದ ಸಾಲಿಗೆ 20×2೦ ಅಡಿ ಅಂತರದಲ್ಲಿ ನಾಟಿ ಮಾಡಿದ್ದಾರೆ. ಉಳಿದ ಭೂಮಿಯಲ್ಲಿ ಕಬ್ಬು ಮತ್ತಿತರ ಆಹಾರಧಾನ್ಯ ಬೆಳೆಗಳನ್ನು ಬೆಳೆಯುತ್ತಿದಾರೆ.

ಕೃಷಿಹೊಂಡಕ್ಕೆ ಮತ್ತು ಹನಿ ನೀರಾವರಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಂದ ಸಹಾಯಧನ ಪಡೆದಿದ್ದು, ಹನಿ ನೀರಾವರಿಯಿಂದ ಬೆಳೆಗಳಿಗೆ ವಾರಕ್ಕೊಮ್ಮೆ ನೀರುಣಿಸುವರು.

ಪ್ರತಿವರ್ಷ 4೦ ಕ್ವಿಂಟಲ್ ಮಾವು, 2೦ ಕ್ವಿಂಟಲ್ ಸಪೋಟ, 4೦ ಕ್ವಿಂಟಲ್ ಪೇರಲು ಉತ್ಪಾದಿಸುತ್ತಿದ್ದಾರೆ. ತಾವು ಉತ್ಪಾದಿಸಿದ ಎಲ್ಲ ಹಣ್ಣು ಮತ್ತು ಆಹಾರಧಾನ್ಯಗಳೆಲ್ಲವನ್ನೂ ಸ್ವತಃ ತಾವೇ ಕಲಬುರಗಿಯ ಐವಾನ್‌ಶಾಹಿ ಪ್ರದೇಶದಲ್ಲಿ ಮಾರುತ್ತಿದ್ದಾರೆ. ಎಲ್ಲ ಬೆಳೆಗಳ ವಾರ್ಷಿಕ ನಿರ್ವಹಣೆಗಾಗಿ ೩ ಲಕ್ಷ ರೂ. ಖರ್ಚಾದರೂ, ಒಟ್ಟು 14 ಲಕ್ಷ ರೂ. ನಿವ್ವಳ ಆದಾಯ ಗಳಿಸುತ್ತಿದ್ದಾರೆ.

ಐದು ಜಾನುವಾರು, 17 ಕುರಿ ಸಾಕಣೆಯಿಂದ ಜೀವಾಮೃತ ತಯಾರಿಸುವರು. ಎರೆಹುಳು ಗೊಬ್ಬರದ ಎಂಟು ಘಟಕಗಳಿಂದ ವರ್ಷಕ್ಕೆ 1೦ ಟನ್ ಎರೆಹುಳು ಗೊಬ್ಬರ ಉತ್ಪಾದಿಸಿ ಹೊಲದಲ್ಲೇ ಬಳಸುತ್ತಿದ್ದಾರಲ್ಲದೆ ರೈತರಿಗೂ ಮಾರುತ್ತಿದ್ದಾರೆ. ಜೇನುಕೃಷಿಗಾಗಿ ನಾಲ್ಕು ಜೇನುಪೆಟ್ಟಿಗೆಗಳಿದ್ದು, ಇದರಿಂದ ವರ್ಷಕ್ಕೆ 1೦೦ ಕೆ.ಜಿ. ಜೇನು ಉತ್ಪಾದಿಸುವರು. ವೈವಿಧ್ಯಮಯ ಬೆಳೆ, ಹೂಕೃಷಿ ಇರುವುದರಿಂದ ಗರಿಷ್ಠ ಹಾಗೂ ಉತ್ತಮ ಗುಣಮಟ್ಟದ ಜೇನು ಉತ್ಪಾದನೆಯಾಗುತ್ತದೆ. ಪ್ರತಿ ಕೆಜಿ ಜೇನುತುಪ್ಪವನ್ನು 6೦ರೂ.ದಂತೆ ಮಾರುವರು.

ಅಂಕೋಲಾ ಮಾದರಿಯ ತೊಗರಿಬೇಳೆ ತಯಾರಿಕಾ ಕಿರುಘಟಕವನ್ನು 2009ರಲ್ಲಿ 1.30 ಲಕ್ಷ ರೂ.ದಿಂದ ಖರೀದಿಸಿದ್ದಾರೆ. ಸಾವಯವ ಪದ್ಧತಿಯಲ್ಲಿ ಬೆಳೆಯಲಾದ ತೊಗರಿಯನ್ನು ಮೊದಲು ನೀರಿನಲ್ಲಿ 4-5 ಗಂಟೆಗಳ ಕಾಲ ನೆನೆಹಾಕಿ ನಾಲ್ಕು ದಿನ ಒಣಗಿಸುವರು. ನಂತರ 15 ದಿನ ಚೀಲದಲ್ಲಿ ಕಟ್ಟಿಟ್ಟು ನಂತರ ಸಾಂಪ್ರದಾಯಿಕ ಪದ್ಧತಿಯಂತೆ ಮಿನಿದಾಲ್ ಮಿಲ್ಲಿನಲ್ಲಿ ತೊಗರಿಬೇಳೆ ಉತ್ಪಾದಿಸಿ “ಬೆಳಗುಂಪಿ” ಬ್ರಾö್ಯಂಡ್ ಹೆಸರಿನಲ್ಲಿ ಎಲ್ಲ ಹಣ್ಣು, ತರಕಾರಿ, ದವಸಧಾನ್ಯ, ಬೆಲ್ಲ, ಜೇನುತುಪ್ಪದೊಂದಿಗೆ ತಾವೇ ಸ್ವತಃ ಮಾರಾಟ ಮಾಡುತ್ತಿದ್ದಾರೆ.


ಕಳೆದೊಂದು ವರ್ಷದಿಂದ ರಾಜ್ಯದ ವಿವಿಧ ಜಿಲ್ಲೆಗಳ 6೦೦ ರೈತರಿಗೆ, ಕೃಷಿ ವಿದ್ಯಾರ್ಥಿಗಳಿಗೆ ಸಾವಯವ ಕೃಷಿಯಲ್ಲಿ ಉತ್ಪಾದನೆಯಿಂದ ಮಾರುಕಟ್ಟೆಯವರೆಗೆ ಯೋಜನೆ ರೂಪಿಸಿಕೊಳ್ಳುವ ಮತ್ತು ಕಡಿಮೆ ವೆಚ್ಚದಿಂದ ಅಧಿಕ ಇಳುವರಿ ಪಡೆಯುವ, ಗೊಬ್ಬರ ಕೀಟನಾಶಕಗಳ ಬಳಕೆ, ಕೊಯ್ಲು ವಿಧಾನದ ಬಗ್ಗೆ ಒಂದು ದಿನದ ಕೃಷಿ ತರಬೇತಿ ನೀಡಿದ್ದಾರೆ. ಮುಂದೆ ಮೂರು ದಿನದ ತರಬೇತಿ ನೀಡಲಿದ್ದಾರೆ.
ರಾಜ್ಯ ಸರ್ಕಾರದ ಕೃಷಿ ಪಂಡಿತ, ಬ್ಯಾಂಕ್ ಆಫ್ ಬರೋಡಾದ ಶ್ರೇಷ್ಠ ಕೃಷಿಕ, ವಿಜಯ ಕರ್ನಾಟಕ ಪತ್ರಿಕೆಯ ಸೂಪರ್ ಸ್ಟಾರ್ ರೈತ, ಏಸಿಯಾ ನೆಟ್ ಸುವರ್ಣ ಟಿವಿಯ ರೈತ ರತ್ನ ಪ್ರಶಸ್ತಿಗಳಲ್ಲದೆ ಅನೇಕ ಸಂಘ ಸಂಸ್ಥೆಗಳಿಂದಲೂ ಹಲವಾರು ಪ್ರಶಸ್ತಿಗಳನ್ನು ಪಡೆದು ಸನ್ಮಾನಿತರಾಗಿದ್ದಾರೆ. ಇವರ ಸಂಪರ್ಕ ಸಂಖ್ಯೆ 9449125035

ಬರಹ: ಜಿ.ಚಂದ್ರಕಾಂತ, ನಿವೃತ್ತ ಉಪನಿರ್ದೇಶಕರು
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,
ಕಲಬುರಗಿ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group