spot_img
Wednesday, October 30, 2024
spot_imgspot_img
spot_img
spot_img

ಕೈ ಹಿಡಿಯಿತು ಮರಗೆಣಸು: ಅರಳಿತು ಸಾವಯವ ಕೃಷಿ ಕನಸು!

ತಿರುವನಂತಪುರದ ಕೃಷಿಕ ವಿನೋದ್ ವೇಣುಗೋಪಾಲ್ ರಬ್ಬರ್ ತೋಟದ ವಿಸ್ತೀರ್ಣ ಒಂದೂವರೆ ಎಕರೆ. ರಬ್ಬರ್ ತೋಟದಿಂದ ಉತ್ತಮ ಇಳುವರಿ ಮತ್ತು ಆದಾಯ ಸಿಗುತ್ತಿತ್ತು.  ಆದರೆ ಅವರಿಗೊಂದು ಕನಸು: ಅದನ್ನು ಸಾವಯವ ತೋಟವನ್ನಾಗಿ ಪರಿವರ್ತಿಸಬೇಕು ಎಂದು.

ಸಸ್ಯಶಾಸ್ತ್ರ ಪದವೀಧರರಾದ ವಿನೋದ್ ವೇಣುಗೋಪಾಲ್ ಕೊನೆಗೊಮ್ಮೆ ತಮ್ಮ ಕನಸು ನನಸಾಗಿಸಲು 2019ರಲ್ಲಿ ನಿರ್ಧರಿಸಿದರು. ಇನ್ನಿಬ್ಬರು ಈ ಸಾಹಸದಲ್ಲಿ ಅವರ ಜೊತೆಗೂಡಿದರು. ತೋಟದ ರಬ್ಬರ್ ಮರಗಳನ್ನೆಲ್ಲ ಕಿತ್ತು ಹಾಕಿ, ಮರಗೆಣಸಿನ ತುಂಡುಗಳನ್ನು ನೆಟ್ಟರು. ಅವರ ಪ್ರಯತ್ನ ಯಶಸ್ವಿಯಾಯಿತು: ಎಂಟು ತಿಂಗಳ ನಂತರ ಅವರು ತಿರುವನಂತಪುರದ ಮಲಯಮ್‌ನ ತಮ್ಮ ತೋಟದಿಂದ ಕೊಯ್ಲು ಮಾಡಿದ್ದು 11,000 ಕಿಗ್ರಾ ಮರಗೆಣಸು!

ವಿನೋದ್ ವೇಣುಗೋಪಾಲ್ ತಮ್ಮ ಹೊಸ ಯೋಜನೆ ಕೈಗೆತ್ತಿಕೊಂಡಾಗ ಅವರ ಬಂಧುಗಳೂ ಇತರರೂ ಟೀಕಿಸಿದ್ದರು. ಯಾಕೆಂದರೆ ಅವರ ತೋಟದಲ್ಲಿ ಬಹುವಾರ್ಷಿಕ ಬೆಳೆಯಾದ ರಬ್ಬರ್ ಉತ್ತಮ ಇಳುವರಿ ನೀಡುತ್ತಿತ್ತು. ವಿನೋದ್ “ವೇರ್ ಇನ್ ಟ್ರಿವೆಂಡ್ರಮ್” ಎಂಬ ಫೇಸ್-ಬುಕ್ ಪುಟದಲ್ಲಿ ತಮ್ಮ ಯೋಜನೆಯ ಬಗ್ಗೆ ಪ್ರಕಟಿಸಿ, ಆಸಕ್ತರು ಜೊತೆಗಾರರಾಗಬಹುದೆಂದು ಆಹ್ವಾನಿಸಿದರು. ಕೊನೆಗೆ ಅನು ಜೋಸೆಫ್ ಮತ್ತು ಫಿಲಿಫ್ ಚಾಕೋ ಅವರನ್ನು ಜೊತೆಗಾರರನ್ನಾಗಿ ಆಯ್ಕೆ ಮಾಡಿದರು. “ನನಗೆ ಯೋಜನೆಯಲ್ಲಿ ಹಣ ಹೂಡಬಲ್ಲವರು ಬೇಕಾಗಿರಲಿಲ್ಲ; ಬದಲಾಗಿ ಸಮಯ ಮತ್ತು ಶ್ರಮ ಹೂಡಬಲ್ಲವರು ಬೇಕಾಗಿದ್ದರು” ಎನ್ನುತ್ತಾರೆ ವಿನೋದ್.

ತಿರುವನಂತಪುರದ ಕೇಂದ್ರೀಯ ಗೆಡ್ಡೆ ಬೆಳೆಗಳ ಸಂಶೋಧನಾ ಕೇಂದ್ರದಿಂದ 2,000 ಮರಗೆಣಸಿನ ತುಂಡುಗಳನ್ನು ತಂದು, ಡಿಸೆಂಬರ 2019ರಲ್ಲಿ ತಮ್ಮ ತೋಟದಲ್ಲಿ ನೆಟ್ಟರು. (ಸಸ್ಯಶಾಸ್ತ್ರೀಯ ಹೆಸರು: ಮನಿಹೋಟ್ ಎಸ್ಕುಲೆಂಟಾ; ಇಂಗ್ಲಿಷ್ ಹೆಸರು: ಟಾಪಿಯೋಕಾ ಮತ್ತು ಕಸ್ಸವಾ; ಸಸ್ಯಕುಟುಂಬ: ಇಫೋರ್-ಬಿಯೇಸಿ ಅಂದರೆ ಹರಳು ಸಸ್ಯದ ಕುಟುಂಬ) ವಿನೋದರ ತೋಟದಲ್ಲಿತ್ತು ಫಲವತ್ತಾದ ಕೆಂಪು ಮಣ್ಣು. ಅದು ಯಾವುದೇ ಬೆಳೆಗೆ ಸೂಕ್ತವಾಗಿತ್ತು.

ಎಂಟು ತಿಂಗಳ ನಂತರ, ಸಪ್ಟಂಬರ್ 2020ರಲ್ಲಿ 11,000 ಕಿಗ್ರಾ ಭರ್ಜರಿ ಫಸಲು ಲಭಿಸಿತು. ಅವರದನ್ನು ಯಾವುದೇ ರಖಂ ವ್ಯಾಪಾರಿಗಳಿಗೆ ಅಥವಾ ಮಧ್ಯವರ್ತಿಗಳಿಗೆ ಮಾರಾಟ ಮಾಡಲಿಲ್ಲ; ಬದಲಾಗಿ ರಸ್ತೆ ಬದಿ ವ್ಯಾಪಾರಿಗಳಿಗೆ, ಸಣ್ಣ ತರಕಾರಿ ಮಳಿಗೆಗಳಿಗೆ ಮತ್ತು ಹೋಟೆಲುಗಳಿಗೆ ಮಾರಾಟ ಮಾಡಿದರು. ಸ್ವಲ್ಪ ಭಾಗವನ್ನು ಬಂಧುಗಳಿಗೂ ಸ್ನೇಹಿತರಿಗೂ ಹಂಚಿದರು.

ಅನಂತರ ವಿನೋದ್ ವೇಣುಗೋಪಾಲ್ ಮತ್ತು ಜೊತೆಗಾರರು ವಿವಿಧ ಬೆಳೆಗಳನ್ನು ಬೆಳೆಯಲು ನಿರ್ಧರಿಸಿದರು. ಅಲ್ಪಾವಧಿ ಬೆಳೆಗಳಾದ ಅರಿಶಿನ, ಶುಂಠಿ ಮತ್ತು ಸುವರ್ಣಗೆಡ್ಡೆ ನೆಟ್ಟರು. ಜೊತೆಗೆ ಬಹುವಾರ್ಷಿಕ ಬೆಳೆಗಳಾದ ತೆಂಗು, ಅಡಿಕೆ, ಗೇರು, ನುಗ್ಗೆ, ಕರಿಬೇವು ಇವುಗಳ ಗಿಡಗಳನ್ನೂ ಕರಿಮೆಣಸು ಬಳ್ಳಿಗಳನ್ನೂ ನೆಟ್ಟರು.

ಅಲ್ಪಾವಧಿ ಬೆಳೆಗಳ ಫಸಲಿನ ಒಂದು ಭಾಗವನ್ನು ಬಂಧುಗಳು ಮತ್ತು ಸ್ನೇಹಿತರಿಗೆ ಮಾರಾಟ ಮಾಡಿ, ಉಳಿದುದನ್ನು ಮುಂದಿನ ಹಂಗಾಮಿಗೆ ಬೀಜವಾಗಿ ಉಳಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ, ಅಲ್ಪಾವಧಿ ಬೆಳೆಗಳಿಂದ ಲಾಭ ಪಡೆಯಲು ತಾವು ಇನ್ನೆರಡು ವರುಷ ಕಾಯಬೇಕಾಗುತ್ತದೆಂದು ತಿಳಿಸುತ್ತಾರೆ ವಿನೋದ್ ವೇಣುಗೋಪಾಲ್.


ವೈದ್ಯಕೀಯ ಉಪಕರಣಗಳ ಕಂಪೆನಿಯೊಂದರಲ್ಲಿ ಪ್ರಾದೇಶಿಕ ಮೆನೇಜರ್ ಆಗಿರುವ ವಿನೋದ್ ವಾರಾಂತ್ಯಗಳಲ್ಲಿ ಮಾತ್ರ ತನ್ನ ತೋಟಕ್ಕೆ ಭೇಟಿ ನೀಡಿ, ಉಸ್ತುವಾರಿ ಮಾಡುತ್ತಾರೆ. ಉಳಿದ ದಿನಗಳಲ್ಲಿ ಕೃಷಿ ಕೆಲಸಗಾರರಿಂದ ತೋಟದ ಕೆಲಸಗಳನ್ನು ಮಾಡಿಸುತ್ತಾರೆ. ಬೀಜರಹಿತ ಲಿಂಬೆಯ ಮಲೇಷ್ಯಾದ ತಳಿಯ 50 ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಇಡುಕ್ಕಿ ಜಿಲ್ಲೆಯ ತೊಡಪುಜಾದಿಂದ ಆ ಗಿಡಗಳನ್ನು ತಂದಿದ್ದಾರೆ. ಅದು ಅಪರೂಪದ ರಸಭರಿತ ತಳಿ.

ಅವರು ತಮ್ಮ ತೋಟದ ಬೆಳೆಗಳಿಗೆ ದನದ ಸೆಗಣಿ ಗೊಬ್ಬರ ಹಾಕುತ್ತಾರೆ. ಜೊತೆಗೆ, ಕೋಳಿಹಿಕ್ಕೆ ಗೊಬ್ಬರ ಮತ್ತು ಎರೆಗೊಬ್ಬರವನ್ನೂ ಹಾಕುತ್ತಾರೆ. ಅವರ ಕೃಷಿ ಸಂಪೂರ್ಣ ಸಾವಯವ. ತೋಟದ ಬೆಳೆಗಳಿಗೆ ಯಾವುದೇ ರಾಸಾಯನಿಕ ಗೊಬ್ಬರ ಅಥವಾ ಪೀಡೆನಾಶಕಗಳನ್ನು ಅವರು ಬಳಕೆ ಮಾಡುತ್ತಿಲ್ಲ.

ಕೃಷಿ ಭವನದಿಂದ ಬೀಜಗಳನ್ನು ತಂದು, ಓಣಂ ಸಮಯಕ್ಕೆ ಸರಿಯಾಗಿ ಹೂ ಬಿಡುವಂತೆ ಚೆಂಡುಮಲ್ಲಿಗೆ ಹೂಗಳನ್ನು ಐವತ್ತು ಸೆಂಟ್ಸಿನಲ್ಲಿ ಬೆಳೆಸಿದ್ದು, ವಿನೋದ್ ವೇಣುಗೋಪಾಲರ ಮಗದೊಂದು ಪ್ರಯತ್ನ. ಮುಂದಿನ ದಿನಗಳಲ್ಲಿ, ತಮ್ಮ ತೋಟದ ಫಸಲಿನಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡಬೇಕೆಂಬುದು ಅವರ ಯೋಜನೆ.

«ಅಡ್ಡೂರು ಕೃಷ್ಣ ರಾವ್

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group