ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ಔಪಚಾರೀಕರಣ ಯೋಜನೆ ಅಡಿಯಲ್ಲಿ ಕಿರು ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಹಾಗೂ ಉದ್ದಿಮೆಗಳ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಸಹಾಯಧನ ದೊರೆಯಲಿದೆ. ಈ ಯೋಜನೆಯಡಿ ವೈಯಕ್ತಿಕ ಕಿರು ಉದ್ದಿಮೆಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳು, ಉತ್ಪಾದಕ ಸೊಸೈಟಿಗಳಿಗೆ ಸಂಸ್ಕರಣ ಉದ್ದಿಮೆ ಪ್ರಾರಂಭಿಸಲು ಹಾಗೂ ಉದ್ದಿಮೆಯನ್ನು ಅಭಿವೃದ್ಧಿಪಡಿಸಲು ಅವಕಾಶವಿದೆ
ವೈಯಕ್ತಿಕ ಕಿರು ಉದ್ದಿಮೆಗಳಿಗೆ, ರೈತ ಉತ್ಪಾದಕ ಸಂಸ್ಥೆ, ಸರ್ಕಾರಿ ಸಂಘಗಳಿಗೆ, ಸ್ವ ಸಹಾಯ ಸಂಘ ಮೊದಲಾದವುಗಳಿಗೆ ಸಾಲ ಸಂಪರ್ಕಿತ ಸಹಾಯಧನದ ದೊರೆಯಲಿದೆ. ಕೇಂದ್ರದಿಂದ ಶೇ.35 ಹಾಗೂ ರಾಜ್ಯದಿಂದ ಶೇ.15 ಸಹಾಯಧನ ಸೇರಿದಂತೆ ಶೇ.5೦ರಷ್ಟು ಅಥವಾ ಗರಿಷ್ಠ 15 ಲಕ್ಷ ಸಹಾಯಧನ ಪಡೆಯುವ ಅವಕಾಶ ಈ ಯೋಜನೆಯಲ್ಲಿದೆ.
ಪ್ರಾಥಮಿಕ ಬಂಡವಾಳ
ಆಹಾರ ಸಂಸ್ಕರಣೆ ಚಟುವಟಿಕೆಗಳಲ್ಲಿ ತೊಡಗಿರುವ ಸ್ವಸಹಾಯ ಸಂಘಗಳ ಸದಸ್ಯರಿಗೆ ದುಡಿಯುವ ಬಂಡವಾಳ ಮತ್ತು ಸಣ್ಣ ಉಪಕರಣಗಳ ಖರೀದಿಗಾಗಿ ಪ್ರತಿ ಸದಸ್ಯರಿಗೆ 4೦೦೦೦ ಪ್ರಾಥಮಿಕ ಬಂಡವಾಳ ಹಾಗೂ ಪ್ರತೀ ಸ್ವಸಹಾಯ ಸಂಘಕ್ಕೆ ಗರಿಷ್ಠ 4ಲಕ್ಷ ಪಡೆಯುವ ಅವಕಾಶವಿದೆ
ಮೂಲಭೂತ ಸೌಕರ್ಯಕ್ಕೆ ಸಹಾಯಧನ
ಸಾಮಾನ್ಯ ಮೂಲಭೂತ ಸೌಕರ್ಯ ಸೃಷ್ಟಿಗೆ ಸಾಲ ಸಂಪರ್ಕಿತ ಸಹಾಯಧನವಿದೆ. ರೈತ ಉತ್ಪಾದಕ ಸಂಸ್ಥೆಗಳುರ‍್ಯತ ಉತ್ಪಾದಕ ಕಂಪನಿಗಳು, ಸಹಕಾರಿ, ಸ್ವ ಸಹಾಯ ಸಂಘ ಮತ್ತು ಅದರ ಒಕ್ಕೂಟ ಮೊದಲಾದುವುಗಳು ಇದರ ಪ್ರಯೋಜನ ಪಡೆಯಬಹುದಾಗಿದೆ. ವಿಂಗಡಣೆ, ಶ್ರೇಣೀಕರಣ, ಸಂಗ್ರಹಣೆ ಸಾಮಾನ್ಯ ಸಂಸ್ಕರಣೆ, ಪ್ಯಾಕೆಜಿಂಗ್ ಮತ್ತು ಪ್ರಯೋಗಾಲಯ ಮೊದಲಾದುವುಗಳನ್ನು ಸ್ಥಾಪಿಸಲು ಅವಕಾಶವಿದೆ.
ಬ್ರ‍್ಯಾಂಡಿಂಗ್ ಮತ್ತು ಮಾರುಕಟ್ಟೆಗೆ ಸಹಾಯಧನ
ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಚಟುವಟಿಕೆಗಳಾದ ಪ್ಯಾಕೆಜಿಂಗ್, ಬ್ರಾಂಡ್ ಅಭಿವೃದ್ಧಿ, ಮೊದಲಾದುವುಗಳಿಗೆ ಶೇ.5೦ರಷ್ಟು ಸಹಾಯಧನವಿದೆ. ಈ ಅನುಕೂಲತೆಗಳನ್ನು ರೈತ ಉತ್ಪಾದಕ ಸಂಸ್ಥೆಗಳು/ಕಂಪೆಮಿಗಳು, ಸಹಕಾರಿಗಳು, ಸ್ವ ಸಹಾಯ ಸಂಘಗಳು ಸಹಕಾರಿ ಸಂಸ್ಥೆಗಳು ಮತ್ತು ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ವಿಶೇಷ ಉದ್ದೇಶ ಸಂಸ್ಥೆ ಮೊದಲಾದುವುಗಳು ಈ ನೆರವನ್ನು ಪಡೆಯಬಹುದು.
ಕಿರು ಆಹಾರ ಸಂಸ್ಕರಣ ಯೋಜನೆಯಡಿ ಮಾಡಬಹುದಾದ ಉದ್ದಿಮೆಗಳು
ಈ ಯೋಜನೆಯಡಿ ಸಿರಿಧಾನ್ಯಗಳ ಸಂಸ್ಕರಣೆ, ಬೇಕರಿ ಉತ್ಪನ್ನಗಳು, ಹಣ್ಣು ತರಕಾರಿಗಳ ಮೌಲ್ಯವರ್ಧಿತ ಉತ್ಪನ್ನಗಳು, ತೆಂಗಿನ ಉತ್ಪನ್ನಗಳು, ಮಸಲಾ ಉತ್ಪನ್ನಗಳು, ಸಮುದ್ರ ಉತ್ಪನ್ನಗಳು, ಬೆಲ್ಲ ತಯಾರಿ, ಮೆಣಸಿನ ಪುಡಿ ಘಟಕಗಳು, ಶುಂಠಿ ಸಂಸ್ಕರಣೆ, ಎಣ್ಣೆಗಾಣಗಳು ಮೊದಲಾದವು ಸೇರಿದಂತೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಸಂಬಂಧಿತ ಉತ್ಪನ್ನಗಳ ಸಂಸ್ಕರಣೆ ಉದ್ದಮೆಗಳನ್ನು ಆರಂಭಿಸಬಹುದು
ರೈತರ ಉತ್ಪನ್ನಗಳನ್ನೇ ಬಳಸಿ ಗ್ರಾಮೀಣ ಭಾಗದಲ್ಲಿ ಘಟಕಗಳನ್ನು ಆರಂಭಿಸುವುದರಿಂದ ಸ್ಥಳೀಯ ಮಟ್ಟದಲ್ಲಿ ಯುವ ಸಮುದಾಯಕ್ಕೆ ಉದ್ಯೋಗ ಸೃಷ್ಟಿಯಾಗುತ್ತದೆ. ಗ್ರಾಮೀಣ ಆರ್ಥಿಕತೆ ಚೇತರಿಸಿಕೊಳ್ಳಲು, ರೈತರು ಬೆಳೆದ ಉತ್ಪನ್ನಗಳಿಗೆ ಹಳ್ಳಿಗಳಲ್ಲಿಯೇ ಉತ್ತಮ ಬೆಲೆ ದೊರೆಯಲು ಸಾಧ್ಯವಾಗಬಹುದು.