spot_img
Wednesday, November 27, 2024
spot_imgspot_img
spot_img
spot_img

ಬಾಳೆ ನಾರಿನಿಂದ ಕರಕುಶಲ ವಸ್ತು:ಸ್ವದ್ಯೋಗ ಉದ್ಯಮಕ್ಕೆ ಆಸರೆಯಾಯಿತು ಬಾಳೆದಿಂಡು

-ರಾಧಾಕೃಷ್ಣ ತೊಡಿಕಾನ

ಬಾಳೆ ಪಾರಂಪರಿಕ ಬೆಳೆ. ಧಾರ್ಮಿಕ ಪೂಜೆ ಪುರಸ್ಕಾರ ಹಾಗೂ ಆಹಾರವಾಗಿಯೂ ಬಾಳೆ ಹಣ್ಣು ಜನಪ್ರಿಯ. ಬಾಳೆ ಗೊನೆ ಹಾಕಿದ ನಂತರ ಅದರ ಕಥೆ ಮುಗಿಯಿತು. ಬಾಳೆಗೊನೆ ಮಾರುಕಟ್ಟೆ ಸೇರುತ್ತದೆ. ಬಾಳೆಯ ಉಳಿದ ಭಾಗ ತ್ಯಾಜ್ಯದ ಹಾಗೆ. ತೋಟದ ಮೂಲೆಯಲ್ಲಿ ಕೊಳೆತು ಗೊಬ್ಬರವಾಗುವುದು ಬಿಟ್ಟರೆ ಮತ್ತೇನು ಸಾಧ್ಯವಾಗದೆಂದು ತುಂಡರಿಸಿ ಎಸೆದು ಬಿಡುತ್ತಾರೆ. ಹೆಚ್ಚೆಂದರೆ ಹೂವು ಮಾಲೆ ಮಾಡುವುದಕ್ಕೆ ಬಾಳೆನಾರಿನ ಹಗ್ಗ ಉಪಯೋಗಿಸುವುದಿದೆ. ಹೂವಿನೊಂದಿಗೆ ನಾರು ದೇವರ ಗುಡಿಗೋ, ನಾರಿಯ ಮುಡಿಗೋ ಸೇರುವುದಿದೆ. ಬಾಳೆಯ ದಿಂಡು ನಾರುಗಳಿಂದಲೂ ಆದಾಯ ಪಡೆಯಬಹುದು. ಉದ್ಯೋಗ – ಉದ್ಯಮ ರೂಪಿಸಿಕೊಳ್ಳಬಹುದು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಬಾಳೆಯ ತ್ಯಾಜ್ಯವೂ ಹೊಸ ಉತ್ಪನ್ನಗಳಿಗೆ ಬೇಕಾದ ಕಚ್ಚ ವಸ್ತುಗಳಾಗಬಹುದು, ಕಸದಿಂದಲೂ ರಸ ತೆಗೆಯಬಹುದು, ಎಂಬುದಕ್ಕೆ ಉಮ್ಮತ್ತೂರಿನ ವರ್ಷಾ ಸಾಕ್ಷಿಯಾಗಿದ್ದಾರೆ.

ಚಾಮರಾಜ ಜಿಲ್ಲೆಯ ಉಮ್ಮತ್ತೂರು ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದ ವರ್ಷಾ ಎಂಟೆಕ್ ಪದವಿ ಪಡೆದವರು. ಅವರು ಯಾವುದಾದರೂ ಐಟಿ ಕಂಪೆನಿಯಲ್ಲಿ ಉದ್ಯೋಗಿಯಾಗಿರಬಹುದಿತ್ತು. ಆದರೆ ಅವರನ್ನು ಕೃಷಿ ಕ್ಷೇತ್ರ ಆಕರ್ಷಿಸಿತು. ಚಾಮರಾಜ ಜಿಲ್ಲೆಯ ಉಮ್ಮತ್ತೂರು ಎಂಬ ಪುಟ್ಟ ಹಳ್ಳಿಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡರು. ಮಾವು, ಚಿಕ್ಕು, ಸೀಬೆ, ದಾಳಿಂಬೆ ಮೊದಲಾದ ಸುಮಾರು 3೦ಕ್ಕೂ ಹೆಚ್ಚಿನ ಹಣ್ಣಿನ ಬೆಳೆಗಳನ್ನು ಬೆಳೆದರು. ಆರು ಎಕ್ರೆಯಲ್ಲಿ ಏಲಕ್ಕಿ ಬಾಳೆ, ಪಚ್ಚೆ ಬಾಳೆ, ಕೆಂಬಾಳೆ ಸೇರಿದಂತೆ ವಿವಿಧ ಬಾಳೆ ಕೃಷಿ ಮಾಡಿದರು. ಕೋವಿಡಿನ ಸಂದರ್ಭದಲ್ಲಿ ಬಾಳೆಗೊನೆ ಕೊಳ್ಳುವವರಿಲ್ಲದೆ ಕೊಳೆತು ಹೋದವು. ಬಾಳೆ ಕೃಷಿಗೆ ಹಾಕಿದ ದುಡ್ಡೂ ಹೋಯಿತು. ಮುಂದೇನೂ ಎಂಬ ಪ್ರಶ್ನೆ ಎದುರಿತ್ತು. ಬಾಳೆಗೊನೆ ಹೋದದ್ದು ಹೋಯಿತು, ಬಾಳೆ ನಾರನ್ನು ಬಳಸಿಕೊಂಡು ಏನಾದರೂ ಮಾಡಬಹುದೇ ಎಂಬ ಯೋಚನೆ ಹೊಳೆದಾಗ ಗೂಗಲ್‌ನಲ್ಲಿ ಮಾಹಿತಿಯೇನಾದರೂ ಸಿಗಬಹುದೆಂದು ತಡಕಾಡಿದರು.

ಬಾಳೆನಾರಿನ ಉದ್ಯಮದ ಬಗ್ಗೆ ಒಂದಿಷ್ಟು ಮಾಹಿತಿಗಳು ಸಿಕ್ಕಿದವು. ನೀರಲ್ಲಿ ಮುಳುಗುತ್ತಿರುವವನಿಗೆ ಸಣ್ಣ ಹುಲ್ಲು ಕಡ್ಡಿ ಆಸರೆಗೆ ಸಿಕ್ಕಂತೆ ಬಾಳೆನಾರಿನ ಮಾಹಿತಿ ಅವರಲ್ಲಿ ಹೊಸ ಯೋಜನೆಯನ್ನು ಹುಟ್ಟು ಹಾಕಿತು. ಚಾಮರಾಜನಗರದ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿಯಿತ್ತು ಈ ಬಗ್ಗೆ ಪ್ರಸ್ತಾಪಿಸಿದರು. ಆ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಬಾಳೆ ನಾರಿನಿಂದ ಕರಕುಶಲ ವಸ್ತುಗಳು, ಬಟ್ಟೆ ತಯಾರಿ ಮಾಡುತ್ತಿರುವುದು ಗಮನಕ್ಕೆ ತಂದರು. ತಮಿಳುನಾಡಿಗೆ ಹೋಗಿ ತರಬೇತಿ ಪಡೆದು ಬಾಳೆನಾರಿನಿಂದ ಕರಕುಶಲ ಉತ್ಪನ್ನಗಳ ತಯಾರಿಗೆ ಮುಂದಾದರು. ಆರಂಭದಲ್ಲಿ ಇದೆಲ್ಲಾ ಸಾಧ್ಯವೇ ಎಂದು ನೆರೆಕರೆಯವರೂ ಅನುಮಾನದಿಂದಲೇ ನೋಡಿದರು. ಆದರೆ ವರ್ಷಾ ಅವರ ಶ್ರದ್ಧೆ, ಆಸಕ್ತಿ ಪ್ರಯತ್ನಕ್ಕೆ ಹೊಸದಾದ ತಿರುವು ಸಿಕ್ಕಿತು.

ಬಾಳೆನಾರಿನಿಂದ ಕರಕುಶಲ ವಸ್ತುಗಳು

ಬಾಳೆ ಬಹೂಪಯೋಗಿ. ಬಾಳೆಕಾಯಿ ಮತ್ತು ಹಣ್ಣನ್ನು ಸಂಸ್ಕರಿಸಿ ವಿವಿಧ ಆಹಾರ ಪದಾರ್ಥಗಳನ್ನು ತಯಾರಿಸಬಹುದು. ಬಾಳೆ ಎಲೆಯನ್ನು ಊಟದ ತಟ್ಟೆಯಾಗಿ ಬಳಸಿದರೆ ಆರೋಗ್ಯಕ್ಕೆ ಉತ್ತಮ. ಬಾಳೆ ಹೂವಿನಲ್ಲೂ ಹಲವು ರುಚಿಕರ ಖಾದ್ಯ ಮಾಡಬಹುದು. ಬಾಳೆದಿಂಡಿನಿಂದ ಉಪ್ಪಿನ ಕಾಯಿ, ಆರೋಗ್ಯವರ್ಧಕ ತಂಪು ಪೇಯ, ಬಾಳೆ ನಾರಿನಿಂದ ಕರಕುಶಲ ವಸ್ತುಗಳು ತಯಾರಿಸಬಹುದೆಂದು ಮನಗಂಡಿದ್ದರು. ಬಾಳೆಗೊನೆಯೇನೋ ಮಾರುಕಟ್ಟೆಗೆ ಹೋಗುತ್ತದೆ. ಹಾಗಾಗಿ ಅದರ ಸಂಸ್ಕರಣೆಯ ಗೋಜಿಗೆ ಅವರು ಹೋಗಲಿಲ್ಲ. ಬಾಳೆಯ ತ್ಯಾಜ್ಯವಾಗುವ ಉಳಿದ ಭಾಗಗಳನ್ನು ಉಪಯೋಗಿಸುವುದರತ್ತ ಗಮನ ಹರಿಸಿದರು. ಅದರ ಅಡಿಗಲ್ಲಾಗಿ ಆಕೃತಿ ಇಕೋ ಫ್ರೆಂಡ್ಲಿ ಎಂಟರ್‌ಪ್ರೆಸಸ್ ಸಂಸ್ಥೆ ಹುಟ್ಟಿಕೊಂಡಿತು. ಬಾಳೆನಾರಿನ ಉತ್ಪನ್ನ ಆರಂಭವಾಯಿತು.

ನಾಜೂಕಿನಿಂದ ಕೂಡಿದ ಆಕರ್ಷಕ ಮಹಿಳೆಯರ ಕೈ ಚೀಲ. ಸುಂದರವಾದ ಹೂವಿನ ಬುಟ್ಟಿ, ಚಿತ್ತಾಕರ್ಷಕ ಪರ್ಸ್, ಗಡಿಯಾರಗಳು, ಮನಸೆಳೆವ ಬಳೆಗಳು, ಯೋಗಾಸನ ಚಾಪೆ, ನೆಲಹಾಸು, ಪೆನ್ ಸ್ಟಾö್ಯಂಡ್ ಹೀಗೆ ಕಲಾತ್ಮಕತೆಯನ್ನು ಹೊಂದಿದ ಕೈಯಿಂದಲೇ ನೆಯ್ದ ಚಿತ್ತಾರದ ಹಲವು ವಸ್ತುಗಳನ್ನು ಬಾಳೆ ನಾರಿನಿಂದ ತಯಾರಿಸುತ್ತಿದ್ದಾರೆ. 5೦ರೂಪಾಯಿಯಿಂದ ಒಂದು ಸಾವಿರ ರೂಪಾಯಿವರೆಗೆ ಈ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ

ಬಾಳೆ ಗೊನೆ ಕಡಿದ ನಂತರ ಬಾಳೆಯ ದಿಂಡನ್ನು ತಂದು ಅದರ ಪದರಗಳನ್ನು ಬಿಡಿಸಿ ಯಂತ್ರದ ಮೂಲಕ ಅದರ ನಾರುಗಳನ್ನು ತೆಗೆದು ಒಣಗಿಸಿ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಬಾಳೆ ನಾರನ್ನು ನಾನಾ ಹಂತಗಳಲ್ಲಿ ಸಂಸ್ಕರಿಸಲಾಗುತ್ತದೆ. ಪರಿಸರ ಸ್ನೇಹಿಯಾದ ಈ ಉತ್ಪನ್ನ ಬಾಳೆಯ ತ್ಯಾಜ್ಯಗಳೇ. ಗಿಡವೊಂದರಲ್ಲಿ ಸುಮಾರು 150-200 ಗ್ರಾಂ. ನಾರು ತೆಗೆಯಲಾಗುತ್ತದೆ. ಇವರು ತಮ್ಮ ತೋಟದ ಬಾಳೆಯಲ್ಲದೆ ಆಸುಪಾಸಿನವರ ತೋಟದಿಂದಲೂ ಬಾಳೆ ಪಡೆದುಕೊಳ್ಳುತ್ತಾರೆ. ಬಾಳೆಯನ್ನು ಮನೆಗೆ ತಂದುಕೊಟ್ಟರೆ 5-8 ರೂಪಾಯಿ ನೀಡುತ್ತಾರೆ.

ಬಾಳೆಯಿಂದ ನಾರು ಮಾತ್ರವಲ್ಲದೆ ಬಾಳೆದಿಂಡಿನ ಉಪ್ಪಿನಕಾಯಿ, ಹಪ್ಪಳ, ಸಂಡಿಗೆ ಬಾಳೆದಿಂಡಿನ ಪಾನೀಯ ತಯಾರಿಸಲಾಗುತ್ತದೆ. ಬಾಳೆ ಹೂವಿನಿಂದ ಹಪ್ಪಳ, ಚಟ್ನಿಪುಡಿ, ತೊಪ್ಪು ಮತ್ತಿತರ ಖಾದ್ಯಗಳನ್ನು ಮಾಡಲಾಗುತ್ತದೆ. ಇವರು ತಮ್ಮ ಸಂಸ್ಥೆಯಲ್ಲಿ 1೦ ಮಂದಿಗೆ ಉದ್ಯೋಗ ಅವಕಾಶ ನೀಡಿದ್ದಾರೆ. ಗ್ರಾಮೀಣ ಪರಿಸರದಲ್ಲಿ ರೈತರಿಗೆ ಒಂದಿಷ್ಟು ಆದಾಯವನ್ನು ತಂದುಕೊಟ್ಟಿದೆ. ಇಂತಹ ಉದ್ಯಮಗಳಿಂದ ಹಳ್ಳಿಗಳಲ್ಲಿ ಉದ್ಯೋಗ, ಪರಿಸರ ಸಹ್ಯ ಉತ್ಪಾದನಾ ವಲಯ ಏರ್ಪಡಿಸಲು ಸಹಕಾರಿ.

ನರೇಂದ್ರ ಮೋದಿಯವರು ಮನ್ ಕಿ ಬಾತಿನಲ್ಲಿ ವರ್ಷಾ ಅವರ ಸಾಧನೆಯನ್ನು ಪ್ರಸ್ತಾಪಿಸಿದ್ದರು. ಕೃಷಿಮೇಳಗಳಲ್ಲಿ ಪ್ರದರ್ಶನ ಮತ್ತು ಮಾರಾಟವಲ್ಲದೆ ಆನ್‌ಲೈನ್ ಮಾರಾಟ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಅವರ ಸಹೋದರಿ ಸ್ಮಿತಾ ಮಾರುಕಟ್ಟೆ ವ್ಯವಸ್ಥೆಗೆ ಸಹಕರಿಸುತ್ತಿದ್ದಾರೆ. ಬಾಳೆ ನಾರಿನ ಕರಕುಶಲ ವಸ್ತುಗಳಿಗೆ ಬೇಡಿಕೆಯಿದೆ. ವರ್ಷಾ ಅವರು ಈ ಉದ್ಯಮದಿಂದ ಯಶಸ್ಸು ಪಡೆದಿದ್ದಾರೆ. ಇತರರಿಗೂ ಪ್ರೇರಣೆಯಾಗಿದ್ದಾರೆ.

ಚಿತ್ರ : ರಾಮ್ ಅಜೆಕಾರ್

ಮಾಹಿತಿಗೆ ಮೊ.  8861001166

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group