spot_img
Sunday, September 8, 2024
spot_imgspot_img
spot_img
spot_img

ಹೈಟೆಕ್ ದೋಟಿ ಖ್ಯಾತಿಯ ಬಾಲಸುಬ್ರಹ್ಮಣ್ಯರಿಂದ ಹೊಸ ಆವಿಷ್ಕಾರ: ಬಹುಸ್ಥರದ ಕಳೆ ಕಟಾವು ಯಂತ್ರ

ಕೃಷಿ ಕ್ಷೇತ್ರದಲ್ಲಿ ಕಳೆ ನಿರ್ವಹಣೆ ಅತೀ ಪ್ರಾಮುಖ್ಯವಾದುದು. ಕಳೆ ಕಟಾವು ಮಾಡಿದರೂ ಮತ್ತೆ ಮತ್ತೆ ತಲೆಯೆತ್ತಿ ನಿಲ್ಲುತ್ತದೆ. ಕೃಷಿ ಉತ್ಪಾದನೆ ಮೇಲೆಯೂ ಪರಿಣಾಮ ಬೀರುತ್ತದೆ. ಕಳೆ ಗಿಡಗಳನ್ನು ನಿರ್ವಹಿಸುವುದಕ್ಕೆ ಕೃಷಿಕ ಬಹಳ ಹೆಣಗಾಡಬೇಕಾಗುತ್ತದೆ. ಕ್ಲಪ್ತಕಾಲದಲ್ಲಿ ಕಳೆ ಹೊಡೆಯುವುದಕ್ಕೆ ಕೂಲಿಗಳ ಸಮಸ್ಯೆ. ಹೀಗಾಗಿ ರೈತರ ಕೃಷಿ ಕ್ಷೇತ್ರದಲ್ಲಿ ಕಳೆ ಕಟಾವು ಯಂತ್ರಗಳು ಸಣ್ಣಗೆ ಸದ್ದು ಮಾಡುತ್ತಿವೆ. ಅದಕ್ಕೂ ಈಗೀಗ ಭಾರೀ ಬೇಡಿಕೆ. ಕೆಲಸದ ಒತ್ತಡ.

ಈ ಯಂತ್ರದ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ತನ್ನದಾದ ಹೊಸ ಆವಿಷ್ಕಾರವನ್ನು ಮಾಡಿರುವ ಹೈಟೆಕ್ ದೋಟಿ ಖ್ಯಾತಿಯ ಬಾಲಸುಬ್ರಹ್ಮಣ್ಯ ಹೆಚ್.ಎಮ್ ಅವರು ಮಲ್ಟಿ ಹೆಡ್ ಗ್ರಾಸ್ ಕಟ್ಟರ್‌ಗಳನ್ನು ಕೃಷಿಲೋಕಕ್ಕೆ ಅನಾವರಣಗೊಳಿಸಿದ್ದಾರೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಾಲಸುಬ್ರಹ್ಮಣ್ಯ ಎಚ್.ಎಮ್ ಅವರು ಕೃಷಿ ಕ್ಷೇತ್ರದಲ್ಲಿ ತನ್ನದೇ ತಂತ್ರಜ್ಞಾನದಿಂದ ರೂಪಿಸಿದ ಹೈಟೆಕ್ ದೋಟಿಯ ಮೂಲಕ ನಾಡಿಗೆ ಪರಿಚಿತರು.

ಕೃಷಿಕ ಕುಟುಂಬದ ಹಿನ್ನಲೆಯುಳ್ಳವರಾದರೂ ತನ್ನ ಪ್ರತಿಭೆಯಿಂದ ಯುಎಸ್ಎಯಲ್ಲಿ ಕಾರ್ ಡಿಸೈನರ್ ಆಗಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಆಕರ್ಷಕವಾದ ವಿನ್ಯಾಸಗಳನ್ನು ರೂಪಿಸಿ ಹಲವಾರು ದೇಶಗಳ ಮನ್ನಣೆಗೆ ಪಾತ್ರರಾದವರು. ಆದರೂ ಅವರೊಳಗೆ ಒಬ್ಬ ಕೃಷಿಕನ ಮನಸ್ಸಿತ್ತು. ಕೃಷಿಕ್ಷೇತ್ರಕ್ಕೆ ತನ್ನದಾದ ಕೊಡುಗೆ ನೀಡಬೇಕೆಂಬ ಅದಮ್ಯ ಉತ್ಸಾಹವಿತ್ತು. ಅಡಿಕೆ, ತೆಂಗು ಮೊದಲಾದವುಗಳ ಕೊಯ್ಲಿಗೆ ಬೆಳೆಗಾರರು ಪಡುವ ಕಷ್ಟ. ಕೂಲಿಯಾಳುಗಳ ಸಮಸ್ಯೆ ಮೊದಲಾದವುಗಳನ್ನು ಮನಗಂಡು ಹಗುರವಾದ 1೦ರಿಂದ 8೦ ಅಡಿ ಎತ್ತರದವರೆಗೂ ಲೀಲಾಜಾಲವಾಗಿ ಕಾರ್ಯನಿರ್ವಹಿಸಬಲ್ಲ ಹೈಟೆಕ್ ದೋಟಿಯನ್ನು ಪರಿಚಯಿಸಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೂವಾರಿಗಳಾದ ಡಾ. ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಹೈಟೆಕ್ ದೋಟಿಯ ಕಾರ್ಯಕ್ಷಮತೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ದೇಶದಾದ್ಯಂತ 10,000 ಕ್ಕೂ ಹೆಚ್ಚು ದೋಟಿಗಳು ಮಾರಾಟವಾಗಿದೆ. ವಿಶ್ವದಾದ್ಯಂತದ ಕೃಷಿಕರ ಮನೆಗೆದ್ದಿದ್ದಾರೆ. ಹೈಟೆಕ್ ದೋಟಿ ಬಳಕೆಯಿಂದ ಬಹುತೇಕ ಕೃಷಿಕರಿಗೆ ಕೂಲಿಯಾಳುಗಳ ಸಮಸ್ಯೆ ನೀಗಿದೆ. ಸಮಯದ ಸದುಪಯೋಗವಾಗಿದೆ.

ಕೃಷಿಕಾಯಕದಲ್ಲಿ ತೊಡಗಿಸಿಕೊಂಡಾಗ ಆಗಬಹುದಾದ ಸಾವು-ನೋವು-ಅನಾಹುತಗಳು ತಪ್ಪಿದೆ. ಸುಮಾರು 3೦,೦೦೦ ರೂ. ಬೆಲೆಯಿಂದ ಆರಂಭವಾಗುವ ಕಾರ್ಬನ್ ಹೈಟೆಕ್ ದೋಟಿಗಳು ಹಲವರಿಗೆ ಸ್ವ-ಉದ್ಯೋಗವನ್ನು ಕಲ್ಪಿಸಿದೆ. ಬಾಲಸುಬ್ರಹ್ಮಣ್ಯ ಅವರ ಹೊಸತನದ ಹುಡುಕಾಟ ಅಷ್ಟಕ್ಕೇ ಸೀಮಿತವಾಗಲಿಲ್ಲ. ಯಾವುದಾದರೂ ಹೊಸ ಆವಿಷ್ಕಾರ ಮಾಡಬೇಕೆಂಬ ಯೋಚನೆಯಲ್ಲಿದ್ದ ಅವರ ಕಣ್ಣಿಗೆ ಕಾಣಿಸಿದ್ದು ಕಳೆಕೊಚ್ಚುವ ಯಂತ್ರ

ಮಲ್ಟಿ ಹೆಡ್ ಗ್ರಾಸ್ ಕಟ್ಟರ್

ಹೈಟೆಕ್ ದೋಟಿಯ ಯಶಸ್ಸಿನ ನಂತರ ರೈತರಿಗೆ ಉಪಯುಕ್ತವಾದ ಕೃಷಿ ಯಂತ್ರೋಪಕರಣಗಳನ್ನು ಆವಿಷ್ಕಾರ ಮಾಡಬೇಕೆಂಬ ಹಂಬಲ ಹೆಚ್ಚಾಯಿತು. ಇತ್ತೀಚಿಗಿನ ದಿನಗಳಲ್ಲಿ ತೋಟದ ಕಳೆ ಕೀಳುವುದಕ್ಕೆ ಮಾನವ ಶ್ರಮದ ಬದಲು ಕಳೆಕೊಚ್ಚುವ ಯಂತ್ರಗಳನ್ನು ರೈತರು ನೆಚ್ಚಿಕೊಂಡಿರುವುದನ್ನು ಗಮನಿಸಿದ್ದರು. ಬಹಳಷ್ಟು ದೇಶೀಯ ಹಾಗೂ ವಿದೇಶೀಯ ಯಂತ್ರಗಳು ಮಾರುಕಟ್ಟೆಯಲ್ಲಿದ್ದರೂ ಅವುಗಳೆಲ್ಲವೂ ಒಂದೇ (ಬುರುಡೆ/ತಿರುಗಣೆ)ಬ್ರಶ್ ಹೊಂದಿದವು. ಇದರ ಕಾರ್ಯಕ್ಷಮತೆಯನ್ನು ಎರಡು ಪಟ್ಟು ಅಥವಾ ಮೂರು ಪಟ್ಟು ಹೆಚ್ಚಿಸಲು ಸಾಧ್ಯವೇ ಎಂದು ಯೋಚಿಸಿ ಕಾರ್ಯರೂಪಕ್ಕಿಳಿದಾಗ ಹುಟ್ಟಿಕೊಂಡದ್ದೆ ಮಲ್ಟಿ ಹೆಡ್ ಗ್ರಾಸ್ ಕಟ್ಟರ್.

ಒಂದೇ ಬ್ರಶ್ ಇರುವ ಕಳೆ ಕಟಾವು ಯಂತ್ರವನ್ನು ಪರಿವರ್ತಿಸಿ ಎರಡು ಹಾಗೂ ಮೂರು ಪಟ್ಟು ಹೆಚ್ಚು ಕೆಲಸಗಳನ್ನು ಮಾಡಿಸುವ ಹೊಸ ತಂತ್ರಜ್ಞಾನವನ್ನು ಅಳವಡಿಸಿ ತನ್ನ ಹಾಗೂ ರೈತರ ತೋಟದಲ್ಲಿ ಪ್ರಯೋಗ ಮಾಡಿದರು. ಹೆಗಲ ಮೇಲೆ ಹಾಕಿಕೊಳ್ಳುವ ಯಂತ್ರವು ಏಕಕಾಲಕ್ಕೆ ಎರಡು ಪಟ್ಟು ಕಳೆ ಕಟಾವು ಮಾಡಿದರೆ, ಗಾಡಿಯಲ್ಲಿ ಅಳವಡಿಕೆಯ ಯಂತ್ರವು ಮೂರು ಪಟ್ಟು ಕಳೆ ಕತ್ತರಿಸಬಲ್ಲದು. ಈ ಹೊಸತನದ ತಂತ್ರಜ್ಞಾನಕ್ಕೆ ಪೇಟೆಂಟ್ ಪಡೆದುಕೊಂಡಿದ್ದಾರೆ. ಬಹಳಷ್ಟು ರೈತರು ಈಗಾಗಲೇ ಈ ತಂತ್ರಜ್ಞಾನದ ಪ್ರಯೋಜನ ಮನಗಂಡಿದ್ದಾರೆ. ಬೇಡಿಕೆಯನ್ನು ಸಲ್ಲಿಸುತ್ತಿದ್ದಾರೆ.

ಕೃಷಿಕರ ಸವಾಲುಗಳನ್ನು ಅರಿತು ರೈತರ ಶ್ರಮ ಸಮಯ ಆದಾಯ ಉಳಿತಾಯದ ದೃಷ್ಟಿಯಲ್ಲಿರಿಸಿಕೊಂಡು ಆವಿಷ್ಕಾರವನ್ನು ಮಾಡಿ ರೈತರಿಗೆ ನೀಡುತ್ತಿದ್ದೇನೆ. ರೈತರು ವಿಶ್ವಾಸದಿಂದ ಸ್ವೀಕರಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಖುಷಿ ತಂದಿದೆ. ಎನ್ನುತ್ತಾರೆ ಬಾಲಸುಬ್ರಹ್ಮಣ್ಯ
ಅನಿವಾರ್ಯವಾಗಿ ಹುಟ್ಟೂರಿಗೆ ಮರಳಿ ಕೃಷಿಯ ಜವಾಬ್ದಾರಿ ಹೊರಬೇಕಾಗಿ ಬಂದರೂ ತನ್ನಲ್ಲಿರುವ ಅನ್ವೇಷಣೆಯ ಗುಣವನ್ನು ಬಿಟ್ಟವರಲ್ಲ. ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಇದ್ದುಕೊಂಡೇ ಯಂತ್ರೋಪಕರಣಗಳ ಆವಿಷ್ಕಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡಿಗನೊಬ್ಬನ ಈ ಹೊಸ ಆವಿಷ್ಕಾರಗಳು ಭಾರತದ ಕೃಷಿ ಕ್ಷೇತ್ರಕ್ಕಷ್ಟೆಯಲ್ಲ. ವಿಶ್ವದ ಕೃಷಿರಂಗಕ್ಕೂ ಕೊಡುಗೆಯಾಗಿದೆ.

ಹೈಟೆಕ್ ದೋಟಿ, ಮಲ್ಟಿ ಹೆಡ್ ಗ್ರಾಸ್ ಕಟ್ಟರ್ ನಂತರ ರೈತರಿಗೆ ಉಪಯುಕ್ತವಾಗಬಲ್ಲ ಹಲವು ಆವಿಷ್ಕಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಕಳೆ ಕಟಾವು ಯಂತ್ರದಲ್ಲೇ ಮರ ಕತ್ತರಿಸುವ, ಔಷಧಿ ಸಿಂಪಡಿಸುವ, ಗುಂಡಿ ತೋಡುವ ಯಂತ್ರಗಳನ್ನು ಅಳವಡಿಸಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ. ಒಂದೇ ಯಂತ್ರ ಹಲವು ಉಪಯೋಗ ಎಂಬ ತತ್ವದಡಿ ಯಾಂತ್ರೀಕರಣವನ್ನು ಕಡಿಮೆ ಖರ್ಚಿನಲ್ಲಿ ರೈತರ ಹತ್ತಿರ ಕೊಂಡೊಯ್ಯುವ ಆಶಯ ಅವರಾದಾಗಿದೆ.
ಮಲ್ಟಿ ಗ್ರಾಸ್ ಕಟ್ಟರ್ ಏನಿದರ ಮಹತ್ವ

* ಸಾಮಾನ್ಯವಾಗಿ ಹೆಗಲ ಮೇಲೆ ಹಾಕಿಕೊಳ್ಳುವ ಕಳೆಕಟಾವು ಯಂತ್ರ ಒಂದೇ ಬ್ರಶ್ ಕಟ್ಟರ್. ಇದರಲ್ಲಿ ಎರಡು ಬ್ರಶ್ ಕಟ್ಟರ್ ಬಳಕೆ. ಶ್ರಮವೊಂದೇ ಲಾಭ ಎರಡು
* ಗಾಡಿಯಲ್ಲಿ ಕೊಂಡೊಯ್ಯುವ ಯಂತ್ರಕ್ಕೆ ಮೂರು ಬ್ರಶ್ ಕಟ್ಟರ್‌ಗಳು. ಒಂದು ಗಂಟೆಯ ಶ್ರಮ-ಮೂರು ಗಂಟೆಯ ಪ್ರತಿಫಲ
* 3 ದಿನದ ಕೆಲಸ ಒಂದೇ ದಿನದಲ್ಲಿ. ಕೂಲಿಯಲ್ಲೂ ಸುಮಾರು ರೂ.2೦೦೦ ಉಳಿತಾಯ
* ಹಗುರವಾದ ಯಂತ್ರಗಳು. ಕಾರ್ಯನಿರ್ವಹಣೆ
* ಇಂಧನ ಉಳಿತಾಯ. ತ್ವರಿತ ಗತಿಯಲ್ಲಿ ಕೆಲಸ.
* ಚಿಕ್ಕ ಮಕ್ಕಳು, ಮಹಿಳೆಯರು ಯಾರು ಬೇಕಾದರೂ ಕಳೆ ಕಟಾವು ಮಾಡಬಹುದು. ಕೆಲಸದಾಳುಗಳ ಅವಲಂಬನೆ ಕಡಿಮೆ ಮಾಡಬಹುದು
* ಗಾಡಿಯ ಕಟಾವು ಯಂತ್ರ ತೂಕ 14-15ಕೆಜಿಯಷ್ಟೇ ಆಗಿರುವುದರಿಂದ ಸಮತಟ್ಟಾದ ತೋಟಗಳಲ್ಲದೆ ಗುಡ್ಡ ಬೆಟ್ಟ, ಇಳಿಜಾರು ಪ್ರದೇಶಗಳಲ್ಲಿಯೂ ಸುಲಭವಾಗಿ ಕೊಂಡೊಯ್ಯಬಹುದು
* ಅಡಿಕೆ, ತೆಂಗು, ರಬ್ಬರ್, ಕಾಫಿ, ಬಾಳೆ, ಗೇರು, ಮಾವು, ದಾಳಿಂಬೆ ಮೊದಲಾದ ತೋಟಗಳಲ್ಲಿ ಸಲೀಸಾಗಿ ಕಳೆ ನಿರ್ವಹಣೆ ಮಾಡಬಹುದು
* ಹೆಗಲಿಗೆ ಹಾಕಿಕೊಳ್ಳುವ ಎರಡು ಬ್ರಶ್ ಕಟ್ಟರ್‌ವುಳ್ಳ ಯಂತ್ರಕ್ಕೆ ರೂ.35,000 ಬೆಲೆ. ರೂ.10,೦೦೦ ಸಹಾಯ ಧನವಿರುವುದರಿಂದ 25,೦೦೦ ರೂಪಾಯಿಗೆ ಲಭ್ಯ.
* ಮೂರು ಬ್ರಶ್‌ವುಳ್ಳ ಗಾಡಿ ಅಳವಡಿಕೆ ಕಟಾವು ಯಂತ್ರಕ್ಕೆ 4೦,೦೦೦ ರೂಪಾಯಿ. 1೦,೦೦೦ರೂ ಸಹಾಯಧನವಿರುವುದರಿಂದ 3೦,೦೦೦ ರೂಪಾಯಿಗೆ ಲಭ್ಯ
ಮಾಹಿತಿಗೆ ಮೊ:9606142520, 7259350487

-ಬರಹ :ರಾಧಾಕೃಷ್ಣ ತೊಡಿಕಾನ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group