spot_img
Wednesday, October 30, 2024
spot_imgspot_img
spot_img
spot_img

ಬಯಲುಸೀಮೆ ನಾಡಲ್ಲೊಂದು ಮಲೆನಾಡ ಕಾಫಿ ತೋಟ:

“ಕಾಫಿ” ಪ್ರಪಂಚದ ಎಲ್ಲರಿಗೂ ಅತ್ಯಂತ ಜನಪ್ರಿಯವಾದ ಪೇಯ. ಸಾಮಾನ್ಯವಾಗಿ ಕಾಫಿಯನ್ನು ಕರ್ನಾಟಕದ ಮಲೆನಾಡಿನಲ್ಲಿ ಬೆಳೆಯಲಾಗುತ್ತದೆ. ಆದರೆ ಕಾಫಿಯನ್ನು ಬಯಲುಸೀಮೆ ನಾಡಲ್ಲೂ ಬೆಳೆಯಬಹುದೆಂದು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕೊಂಬಳಿ ಗ್ರಾಮದ ದೊಡ್ಡ ರೈತ ಗಡ್ಡಿ ಸಿದ್ಧಲಿಂಗಪ್ಪ ಬಸಪ್ಪ(82) ಸಾಬೀತುಪಡಿಸಿದ್ದಾರೆ.

ಇವರದು ಅವಿಭಕ್ತ ಕುಟುಂಬ. ಒಟ್ಟು 8೦ ಎಕರೆ ಜಮೀನಿನಲ್ಲಿ ಕೃಷಿ ಮುಖ್ಯ ಕಸುಬು. ಅಡಿಕೆ ಸಸಿಗಳನ್ನು ಖರೀದಿಸಲು ಶಿವಮೊಗ್ಗದ ಕೃಷ್ಣ ನರ್ಸರಿಗೆ ಹೋದಾಗ ನರ್ಸರಿಯಲ್ಲಿ ಕಾಫಿ ಬೆಳೆ ಕಂಡು ನರ್ಸರಿಯವರಿಂದ ಮಾಹಿತಿ ಮತ್ತು ಪ್ರೇರಣೆ ಪಡೆದು ಮಲೆನಾಡಿನಲ್ಲಿ ಬೆಳೆಯುವ ಕಾಫಿಯನ್ನು ಬಯಲುಸೀಮೆ ನಾಡಾದ ತಮ್ಮ ಊರಲ್ಲಿಯೂ ಬೆಳೆಸಬೇಕೆಂದು ನಿರ್ಧರಿಸಿದರು.

ಇದಕ್ಕಾಗಿ ಒಟ್ಟು 8 ಎಕರೆ ಭೂಮಿಯನ್ನು ಚೆನ್ನಾಗಿ ಹದಗೊಳಿಸಿದರು. ನಂತರ ಶಿವಮೊಗ್ಗದ ಕೃಷ್ಣ ನರ್ಸರಿಯಿಂದ ರೋಬಸ್ಟ್ ತಳಿಯ 4೦೦೦ ಕಾಫಿ ಸಸಿಗಳನ್ನು ತಲಾ 8 ರೂ.ದಂತೆ ಖರೀದಿಸಿದರು. ಸಾವಯವ ಕೃಷಿ ಮತ್ತು ಕೊಳವೆಬಾವಿಯಿಂದ ಹನಿ ನೀರಾವರಿ ಅಳವಡಿಸಿಕೊಂಡು 2018 ರ ಜುಲೈ ತಿಂಗಳಲ್ಲಿ ಸಸಿಯಿಂದ ಸಸಿಗೆ ಮತ್ತು ಸಾಲಿನಿಂದ ಸಾಲಿಗೆ 8 ಅಡಿ ಅಂತರದಲ್ಲಿ ನಾಟಿ ಮಾಡಿದ್ದಾರೆ.
ಕಾಫಿ ಬೆಳೆಗೆ ವಾರದಲ್ಲಿ ೩ ದಿನ ನೀರುಣಿಸುವರು. ಕಾಲಕಾಲಕ್ಕೆ ಜೈವಿಕ ಗೊಬ್ಬರ, ಔಷಧಿಗಳನ್ನು ಬಳಸಿ ಬೆಳೆಯ ಸಂರಕ್ಷಣೆ ಮಾಡುವರು. ಕಾಫಿ ತೋಟದ ಯಶಸ್ಸಿನಿಂದ 2021 ರಲ್ಲಿ ಮೊದಲ ಬೆಳೆಯ ಇಳುವರಿ 11 ಕ್ವಿಂಟಲ್ ಬಂದಿದೆ. ಮೂಡಿಗೆರೆ, ಚಿಕ್ಕಮಗಳೂರು ಮಾರಾಟ ಕೇಂದ್ರಗಳಲ್ಲಿ ಪ್ರತಿ ಕ್ವಿಂಟಲ್ಲಿಗೆ 11,೦೦೦ ರೂ.ದಂತೆ ಕಾಫಿ ಬೀಜಗಳನ್ನು ಮಾರಾಟ ಮಾಡಿ 1.21 ಲಕ್ಷ ರೂ. ಪಡೆದಿದ್ದಾರೆ. ಈ ವರ್ಷ 15-20 ಕ್ವಿಂಟಲ್ ಕಾಫಿ ಬೀಜದ ಇಳುವರಿ ನಿರೀಕ್ಷಿಸಿದ್ದಾರೆ.

ಸಾಮಾನ್ಯವಾಗಿ ಹೂವಿನಹಡಗಲಿ, ಹರಪನಹಳ್ಳಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕುಗಳ ಕೂಲಿಕಾರ್ಮಿಕರು ಕೆಲಸ ಅರಸಿಕೊಂಡು ಕಾಫಿ ತೋಟ ಮತ್ತು ಕಬ್ಬು ಬೆಳೆಯುವ ಪ್ರದೇಶಗಳಿಗೆ ವಲಸೆ ಹೋಗುವುದು ವಾಡಿಕೆ. ಈ ತೋಟ ಕೂಲಿ ಕಾರ್ಮಿಕರಿಗೆ ಒಂದು ವರದಾನವೆನ್ನಬಹುದು. ಇವರ ತೋಟದಲ್ಲಿ ಒಟ್ಟು 1೦ ಕಾರ್ಮಿಕರು ಖಾಯಂ ಕೆಲಸ ಮಾಡುತ್ತಿದ್ದಾರೆ. ತೀರ್ಥಹಳ್ಳಿ ತಳಿ ಅಡಿಕೆ ಬೆಳೆಯ 5 ವರ್ಷದ 4೦೦೦ ಗಿಡಗಳಿದ್ದು, ಇಳುವರಿ ಬರಬೇಕಾಗಿದೆ. ನೆರಳಿಗಾಗಿ ಕಾಫಿ ತೋಟದ ಸುತ್ತಲೂ 3೦೦ ಸಾಗುವಾನಿ ಗಿಡಗಳನ್ನು ಬೆಳೆಸಿದ್ದಾರೆ.

ಹನಿ ನೀರಾವರಿಯಿಂದ ಬೆಳೆಯ ಬುಡಕ್ಕಷ್ಟೇ ನೀರು ಹನಿಯುವುದರಿಂದ ಕಳೆ ಸಸ್ಯದ ಭಯವಿಲ್ಲ. ಹೂವಿನಹಡಗಲಿ ತಾಲೂಕಿನ ಹವಾಗುಣಕ್ಕೆ ಕಾಫಿ ಹೊಸ ಬೆಳೆಯಾಗಿದೆ. ನೆರಳು ಆಧಾರಿತ ಮತ್ತು ಶಾಶ್ವತ ನೀರಾವರಿ ಮೂಲವಿರುವ ಪ್ರದೇಶದಲ್ಲಿ ಕಾಫಿಯನ್ನು ಬೆಳೆಯಬಹುದೆಂಬುದು ತೋಟಗಾರಿಕೆ ಅಧಿಕಾರಿಗಳ ಅಭಿಪ್ರಾಯವಾಗಿದೆ.

“ತಮ್ಮ ಉಳಿದ ಭೂಮಿಯಲ್ಲಿ ಮಕ್ಕೆಜೋಳ, ಕಬ್ಬು, ಭತ್ತವನ್ನು ಬೆಳೆದು ವಾರ್ಷಿಕ ೨೦-೩೦ ಲಕ್ಷ ರೂ. ಪಡೆಯಲಾಗುತ್ತದೆ. ಬಯಲುಸೀಮೆಯ ನಾಡಾದ ಕೊಂಬಳಿಯಲ್ಲೇ ಮಲೆನಾಡಿನ ಕಾಫಿ ತೋಟ ಮಾಡುವ ಕನಸು ಈಗ ಸಾಕಾರಗೊಂಡಿದೆ. ನಾನು ಪಾರ್ಶ್ವವಾಯುನಿಂದ ಬಳಲುತ್ತಿರುವುದರಿಂದ ನನ್ನ ಮಕ್ಕಳಾದ ಗುಡ್ಡಪ್ಪ, ಮಹೇಶ, ರಮೇಶ ಮತ್ತು ಬಸವರಾಜ ಪಿ.ಯು.ಸಿ.ವರೆಗೆ ಓದಿದ್ದು, ಈಗ ಸಂಪೂರ್ಣ ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ ಎನ್ನುತ್ತಾರೆ ರೈತ ಗಡ್ಡಿ ಸಿದ್ದಲಿಂಗಪ್ಪ. ಇವರ ಸಂಪರ್ಕ ಸಂಖ್ಯೆ ೯೯೦೧೨೨೫೫೧೯.

ಬರಹ: ಜಿ.ಚಂದ್ರಕಾಂತ,

(ನಿವೃತ್ತ ಉಪನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಲಬುರಗಿ)

 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group