spot_img
Friday, October 18, 2024
spot_imgspot_img
spot_img
spot_img

ಅಡಿಕೆ ಬೆಳೆಗಾರನ ಚಡಪಡಿಕೆಗೊಂದು ಪರಿಹಾರ: ಅಡಿಕೆ ಸುಲಿಯುವುದಕ್ಕೆ ಸಂಚಾರಿ ಘಟಕ:

ಅಡಿಕೆ ದರ ಏರಿದೆ. ಮಾರುಕಟ್ಟೆ ದರ ಏರುಪೇರಾಗುವ ಮೊದಲೇ ಅಡಿಕೆ ಸುಲಿದು ಮಾರಾಟ ಮಾಡಬೇಕು. ಸಾಲದ ವ್ಯವಹಾರ ಮುಗಿಸಬೇಕು, ಮನೆಗೆ ಬೇಕಾದುವುಗಳನ್ನು ಖರೀದಿಸಿಕೊಳ್ಳಬೇಕು. ಆದರೇನು ಅಡಿಕೆ ಸುಲಿಯುವ ಕೆಲಸಗಾರರು ಸಿಗುತ್ತಿಲ್ಲ. ಏನು ಮಾಡೋದು. ಸ್ವಲ್ಪ ಸ್ವಲ್ಪವಾದರೆ ಮನೆಯವರೆ ಸುಲಿದು ಬಿಡುತ್ತಾರೆ. ದೊಡ್ಡ ಪ್ರಮಾಣದ ಅಡಿಕೆ ಬೆಳೆಗಾರರು ಕೆಲಸಗಾರರನ್ನೇ ನೆಚ್ಚಿಕೊಳ್ಳಬೇಕು. ಅಡಿಕೆ ಸುಲಿಯುವ ಕೆಲಸ ಒಂದೇ ಅವಧಿಯಲ್ಲಿ ಆರಂಭವಾದರೆ ನುರಿತ ಕೆಲಸಗಾರರು ಸಿಗುವುದು ಬಹಳ ಕಷ್ಟವೇ. ಇಂತಹ ಸಂದರ್ಭದಲ್ಲಿ ಅಡಿಕೆ ಬೆಳೆಗಾರನ ಚಡಪಡಿಕೆ ಸಾಮಾನ್ಯವಾದುದಲ್ಲ.

ಈ ಸಮಸ್ಯೆಗಳ ದೂರವಾಗಿಸಲು ಅಡಿಕೆ ಸುಲಿಯುವ ಯಂತ್ರಗಳು ಸದ್ದು ಮಾಡಲಾರಂಭಿಸಿವೆ. ಅಲ್ಲಲ್ಲಿ ಅಡಿಕೆ ಸುಲಿಯುವ ಯಂತ್ರದ ಘಟಕಗಳು ತಲೆಯೆತ್ತುತ್ತಿವೆ. ಶೀಘ್ರ ಅಡಿಕೆ ಸುಲಿದು ಕೊಡುವುದಲ್ಲದೆ ಗ್ರಾಮೀಣ ಭಾಗದಲ್ಲಿ ಸಣ್ಣ ಮಟ್ಟದ ಉದ್ಯೋಗವನ್ನು ಸೃಷ್ಟಿಸಿವೆ.
ಸುಬ್ರಾಯ ಭಟ್ ನೆಕ್ಲಾಜೆ ಅಡಿಕೆ ಸುಲಿಯುವ ಸಂಚಾರಿ ಘಟಕವನ್ನು ಹೊಂದಿ ಹಲವಾರು ರೈತರಿಗೆ ತುರ್ತಾಗಿ ಅಡಿಕೆ ಸುಲಿದುಕೊಡುವ ಕಾಯಕದಲ್ಲಿ ತೊಡಗಿಕೊಂಡವರು. ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ವಿವಿಧೆಡೆಗಳಲ್ಲಿ ಯಂತ್ರದ ಮೂಲಕ ಅಡಿಕೆ ಸುಲಿದು ಕೊಟ್ಟಿದ್ದಾರೆ.

ಸುಬ್ರಾಯ ಭಟ್ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೇಪು ಗಾಮದ ನೆಕ್ಲಾಜೆಯವರು, ಗ್ರಾಮೀಣ ಭಾಗದಲ್ಲಿ ಹಲ್ಲರ್ ಇರಿಸಿಕೊಂಡು ಅಕ್ಕಿ ತಯಾರಿಸಿ ಕೊಡುತ್ತಿದ್ದರು. ಕ್ರಮೇಣ ಭತ್ತದ ಗದ್ದೆಗಳು ಮಾಯವಾದವು. ಅಡಿಕೆ ತೋಟಗಳು ಮೇಲೆದ್ದವು. ತನ್ನ ವೃತ್ತಿಯ ಮೇಲೆ ಪರಿಣಾಮಗಳಾದವು. ಆಗ ಅವರು ಕಂಡುಕೊಂಡಿದ್ದು ಅಡಿಕೆ ಸುಲಿಯುವ ಸಂಚಾರಿ ಘಟಕ. ಕಳೆದ ೧೩ ವರ್ಷಗಳಿಂದ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆರಂಭದಲ್ಲಿ ಅಡಿಕೆ ಬೆಳೆಗಾರರು ಯಂತ್ರದಿಂದ ಅಡಿಕೆ ಸುಲಿಸುವುದಕ್ಕೆ ಹಿಂಜರಿಯುತ್ತಿದ್ದರು. ಅಡಿಕೆಗೆ ಗಾಯಗಳಾಗುತ್ತವೆ, ಸರಿಯಾಗಿ ಸುಲಿದು ಬರುವುದಿಲ್ಲ ಎಂಬ ನೆಪವಿತ್ತು. ಈಗ ಉತ್ತಮ ತಂತ್ರಜ್ಞಾನದ ಯಂತ್ರಗಳು ಬಂದಿವೆ. ಬಹಳಷ್ಟು ಬೆಳೆಗಾರರು ಮಿಷನ್ ಮೂಲಕ ಸುಲಿಸುತ್ತಾರೆ. ಅಡಿಕೆಗೆ ಯಾವುದೇ ಗಾಯಗಳಾಗುವುದಿಲ್ಲ. ಕರಿಗೋಟು ಕೂಡಾ ಸುಲಿದು ಬರುತ್ತದೆ. ಎನ್ನುತ್ತಾರೆ ಸುಬ್ರಾಯ ಭಟ್.

ದಿನಕ್ಕೆ ೧೦ಕ್ವಿಂಟಾಲ್ ಅಡಿಕೆ ಸುಲಿಯಲಾಗುತ್ತಿದೆ. ೧೦-೧೫ ಕ್ವಿಂಟಾಲ್‌ಗಿAತ ಹೆಚ್ಚು ಅಡಿಕೆ ಇದ್ದರೆ ಬೆಳೆಗಾರರ ಮನೆ ಬಾಗಿಲಿಗೆ ಯಂತ್ರ ತಂದಿರಿಸಿ ಅಡಿಕೆ ಸುಲಿದು ಕೊಡುತ್ತಾರೆ. ಕಿಲೋವೊಂದಕ್ಕೆ ೧೦-೧೨ ರೂಪಾಯಿ ದರ ವಿಧಿಸುತ್ತಾರೆ. ಐದು-ಆರು ಅಡಿಕೆ ಸುಲಿಯುವ ಯಂತ್ರ ಅವರಲ್ಲಿದೆ. ಕುಂದಾಪುರ ತಾಲೂಕಿನ ಹೆಂಗವಳ್ಳಿಯಲ್ಲಿ ಮನೆ ಮಾಡಿಕೊಂಡಿರುವ ಭಟ್ಟರು ಜಿಲ್ಲೆಯ ಹಲವಾರು ಕಡೆಗಳಲ್ಲಿ ಅಡಿಕೆ ಸುಲಿದು ಕೊಟ್ಟಿದ್ದಾರೆ.

ಬೆಂಗಳೂರಿನ ಉದ್ಯೋಗ ಬಿಟ್ಟು ಬಂದ ಪುತ್ರ
ಭಟ್ಟರ ಪುತ್ರ ರಾಘವೇಂದ್ರ ಸ್ವಾಮಿ ಅವರು ಬೆಂಗಳೂರಿನಲ್ಲಿ ವಾಹನ ವ್ಯವಹಾರ-ಉದ್ಯಮದಲ್ಲಿ ತೊಡಗಿಕೊಂಡಿದ್ದರು. ಕೊರೊನಾ ಅವರನ್ನು ಊರಿಗೆ ಮರಳುವಂತೆ ಮಾಡಿತು. ಮತ್ತೆ ಬೆಂಗಳೂರಿಗೆ ಹೋಗಲಿಲ್ಲ. ಮತ್ತಷ್ಟು ಅಡಿಕೆ ಸುಲಿಯುವ ಮಿಷನ್ ಕೊಂಡುಕೊಂಡು ತಂದೆಯ ವ್ಯವಹಾರದಲ್ಲಿ ಕೈ ಜೋಡಿಸಿದರು. ಮೂರು ಜಿಲ್ಲೆಗಳಲ್ಲಿ ಅಡಿಕೆ ಬೆಳೆಗಾರರಿಗೆ ಮತ್ತಷ್ಟು ಹತ್ತಿರವಾದರು.
ಇದೀಗ ಅಕ್ಕಿ ಗಿರಣಿಗಳು ಇರುವ ಹಾಗೆ ಅಡಿಕೆ ಸುಲಿಯುವ ಘಟಕವೊಂದನ್ನು ಅಡ್ಯನಡ್ಕದ ಉದ್ದುಪದವಿನಲ್ಲಿ ಆರಂಭಿಸುವ ಯೋಜನೆ ಹಮ್ಮಿಕೊಂಡಿದ್ದಾರೆ.

ಅಡಿಕೆ ಬೆಳೆಗಾರರು ಅಡಿಕೆಯನ್ನು ಶ್ರೇಣೀಕರಿಸಿ ಕೊಡಬೇಕೆಂಬ ಬೇಡಿಕೆಯಿದೆ. ಕೆಲಸಗಾರರ ಕೊರತೆ ಇರುವುದರಿಂದ ಸುಲಿದು ಕೊಡುವುದಷ್ಟನ್ನೇ ಮಾಡುತ್ತಿದ್ದೇವೆ. ಎಪ್ರಿಲ್-ಮೇ ತಿಂಗಳಲ್ಲಿ ಅಡಿಕೆ ಸುಲಿದರೆ ನವೆಂಬರ್-ಡಿಸೆಂಬರ್ ವರೆಗೆ ಇಟ್ಟುಕೊಳ್ಳಬಹುದು. ಶೇಖರಣೆಗೂ ಅನುಕೂಲ. ಬೆಲೆ ಬಂದಾಗ- ಹಣಕಾಸಿನ ಅವಶ್ಯಕತೆ ಇದ್ದಾಗ ಸುಲಭವಾಗಿ ಮಾರಾಟ ಮಾಡಬಹುದು. ಕಡಿಮೆ ಕೆಲಸಗಾರರು ಸಾಕು ಎನ್ನುತ್ತಾರೆ ಭಟ್ಟರು ಮಾಹಿತಿಗೆ ಮೊ. 9480101246

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group